ಪ್ರಯಾಗ್ರಾಜ್: ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದಂತೆ. ಬಾಳ ಸಂಗಾತಿಯನ್ನು ಆ ದೇವರೇ ನಮಗೆ ನೀಡಿರುತ್ತಾನಂತೆ. ಇಂತಹ ಬಂಧ ಯಾವುದೇ ಅಡೆತಡೆ ಬಂದರೂ ಶಾಶ್ವತವಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ವಿವಾಹವೇ ಸಾಕ್ಷಿ.
ಇದು ಪ್ರಯಾಗ್ರಾಜ್ನ ಪ್ರತಾಪ್ಗಡ ಜಿಲ್ಲೆಯಲ್ಲಿ ನಡೆದ ಘಟನೆ. ಕುಂದಾ ಪ್ರದೇಶದ ನಿವಾಸಿ ಆರತಿ ಮೌರ್ಯ ಅವರ ವಿವಾಹ ಹತ್ತಿರದ ಗ್ರಾಮದ ಅವದೇಷ್ ಎಂಬುವರೊಂದಿಗೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮ ಎರಡು ಮನೆಯಲ್ಲಿ ತುಂಬಿ ತುಳುಕಾಡುತ್ತಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಎನ್ನುವಾಗಲೇ, ಅಲ್ಲೊಂದು ದುರಂತ ನಡೆದು ಹೋಯಿತು.
ವಧು ಆರತಿಯೊಂದಿಗೆ ವರ ಅವದೇಷ್ ಅವರ ಮದುವೆಗೆ ಸಿದ್ಧತೆಗಳು ಪ್ರಾರಂಭವಾಗಿದ್ದವು. ಕುಟುಂಬ ಸದಸ್ಯರು ಮದುವೆ ತಯಾರಿ ನಡೆಸುತ್ತಿದ್ದರು. ಈ ಸಮಯದಲ್ಲಿ ಮಹಡಿ ಮೇಲಿಂದ ಬೀಳುತ್ತಿದ್ದ ಮಗುವೊಂದನ್ನು ರಕ್ಷಿಸಲು ಹೋದ ವಧು ಆರತಿ ಕಾಲುಜಾರಿ ಮೇಲ್ಛಾವಣಿಯಿಂದ ಕೆಳಗೆ ಬಿದ್ದಿದ್ದಾಳೆ.
ಮೇಲಿನಿಂದ ಬಿದ್ದ ಆರತಿಯ ಬೆನ್ನೆಲುಬು ಸಂಪೂರ್ಣವಾಗಿ ಮುರಿದಿದೆ. ಸೊಂಟ ಮತ್ತು ಕಾಲುಗಳು ಸೇರಿದಂತೆ ದೇಹದ ಇತರ ಭಾಗಗಳು ಗಾಯಗೊಂಡಿವೆ. ತಕ್ಷಣವೇ ವಧುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಮಯದಲ್ಲಿ ಆರತಿ ದುರ್ಬಲಗೊಂಡಿದ್ದು, ಆಕೆಗೆ ಹಲವಾರು ತಿಂಗಳು ಹಾಸಿಗೆಯಿಂದ ಎದ್ದೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಬಳಿಕ ವರ ಅವದೇಷ್ ಕುಟುಂಬಕ್ಕೆ ನಡೆದ ವಿಷಯವನ್ನು ತಿಳಿಸಲಾಯಿತು. ಯಾವುದೇ ಕಾರಣಕ್ಕೂ ಈ ವಿವಾಹ ಸಂಬಂಧವನ್ನು ಮುರಿದುಕೊಳ್ಳಲು ಇಷ್ಟಪಡದ ವಧುವಿನ ಮನೆಯವರು ಆರತಿಯ ತಂಗಿಯನ್ನು ಮದುವೆಯಾಗುವಂತೆ ವರನನ್ನು ಕೇಳಿಕೊಂಡಿದ್ದಾರೆ. ಆದರೆ ಆಶ್ಚರ್ಯ ಎಂಬಂತೆ ಅವದೇಷ್ ತಾನು ಆರತಿಯನ್ನೇ ವಿವಾಹವಾಗುವುದಾಗಿ ಹೇಳಿದ್ದಾನೆ. ಆದರೆ ಹಾಸಿಗೆಯಿಂದ ಮೇಲೇಳಲು ಬಲವಿರದ ವಧು ಆರತಿ ಕೃತಕ ಆಮ್ಲಜನಕದ ಸಹಾಯದಿಂದಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಆದರೆ ಬೇಡಿಕೊಂಡ ಬಳಿಕ ವೈದ್ಯರ ಒಪ್ಪಿಗೆಯ ಮೇರೆಗೆ ಆರತಿಯನ್ನು ಎರಡು ಗಂಟೆಗಳ ಕಾಲ ಮನೆಗೆಗ ಕರೆದುಕೊಂಡು ಬಂದು ವಿವಾಹ ನಡೆಸಲಾಯಿತು.
ಮದುವೆ ಬಳಿಕ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಆತನೇ ನೋಡಿಕೊಳ್ಳುತ್ತಿದ್ದಾನೆ. ಮದುವೆ ಮರುದಿನವೇ, ಆರತಿ ಆಪರೇಷನ್ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆಯ ಒಪ್ಪಿಗೆ ಫಾರ್ಮ್ಗೆ ಅವರ ಪತಿ ಅವದೇಷ್ ಸಹಿ ಮಾಡಿದರು. ಈಗ, ಆರತಿ ಸ್ವಲ್ಪ ಸ್ವಲ್ಪವೇ ಗುಣವಾಗುತ್ತಿದ್ದಾಳೆ. ಬದುಕಿನಲ್ಲಿ ಭರವಸೆ ಕಳೆದುಕೊಂಡ ಆರತಿಗೆ ನಿಜವಾದ ಬಾಳ ಸಂಗಾತಿಯಾಗಿ ಅವದೇಷ್ ಸಾಥ್ ನೀಡಿದರು. ಇವರಿಬ್ಬರ ಈ ಪವಿತ್ರ ಪ್ರೇಮ ಮಾದರಿಯಾಗಿದೆ. ಆರತಿ ಆದಷ್ಟು ಬೇಗ ಗುಣಮುಖರಾಗಿ ತಮ್ಮ ಪತಿಯೊಂದಿಗೆ ಸಂತೋಷವಾಗಿ ಬಾಳು ವಂತಾಗಲಿ ಎಂಬುದೇ ಎಲ್ಲರ ಆಶಯ.