ಕೃಷ್ಣ(ಆಂಧ್ರ ಪ್ರದೇಶ): ಹಾವು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ಘಟನೆ ಕೃಷ್ಣ ಜಿಲ್ಲೆಯ ಕೃತಿವೆನ್ನು ಗುಡಿದಿಬ್ಬ ಗ್ರಾಮದಲ್ಲಿ ನಡೆದಿದೆ. ಕೊಂಡೂರಿ ನಾಗಬಾಬು ಶರ್ಮಾ (48) ಮೃತ ಪೂಜಾರಿ.
ಇವರು ಕಳೆದ ಕೆಲವು ವರ್ಷದಿಂದ ಹೈದರಾಬಾದ್‌ನಲ್ಲಿ ನೆಲೆಸಿದ್ದು, ದಸರಾ ಹಿನ್ನೆಲೆ ಕೃತ್ತಿವೆನ್ನುವಿಗೆ ಆಗಮಿಸಿದ್ದರು. ನಾಗಬಾಬು ಅವರು ಹಳ್ಳಿಗಳಲ್ಲಿ ಕಂಡುಬರುವ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯವನ್ನು ಆಗಾಗ ಮಾಡುತ್ತಿದ್ದರು. ಹೀಗಾಗಿ, ಪೀಠಾಲವ ಗ್ರಾಮದ ರೈತರು ಶನಿವಾರ ಮಧ್ಯಾಹ್ನ ಹಾವು ಹಿಡಿಯುವಂತೆ ಕೊಂಡೂರಿ ನಾಗಬಾಬುಶರ್ಮ ಅವರನ್ನು ಕರೆದೊಯ್ದಿದ್ದರು.
ಸಿಕ್ಕಿಬಿದ್ದ ಹಾವನ್ನು ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸುವಾಗ ಶರ್ಮಾ ಅವರ ಕೈಗೆ ಹಾವು ಕಚ್ಚಿದ್ದು, ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಹತ್ತಿರದ ಚಿನಪಾಂಡ್ರಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅದ್ರೆ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಚಲಿಪಟ್ಟಣಕ್ಕೆ ಕರೆದೊಯ್ಯುವಂತೆ ಸೂಚಿಸಿದ ಕಾರಣ ಮಚಲಿಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಉರಗ ರಕ್ಷಕ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸಾಗರ : ಹಾವು ಹಿಡಿಯಲು ಹೋದ ಯುವಕನಿಗೆ ಹಾವಿನಿಂದಲೇ ಕಡಿತ
ಹಾವು ಕಡಿತದಿಂದ ಹಲವರನ್ನು ರಕ್ಷಿಸಿದ ಇವರೇ ಹಾವು ಕಚ್ಚಿ ಸಾವನ್ನಪ್ಪಿದ್ದು, ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ನಿನ್ನೆ ಮಧ್ಯಾಹ್ನ ಗುಡಿದಿಬ್ಬದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.