ಕೊಟ್ಟಾಯಂ(ಕೇರಳ): ಹಾವುಗಳನ್ನು ರಕ್ಷಿಸುವುದು ಉತ್ತಮವಾದ ಕೆಲಸ. ಹಾವುಗಳನ್ನು ರಕ್ಷಿಸುವ ವೇಳೆ ಕೆಲವೊಮ್ಮೆ ಕಿರಿಕಿರಿಗೂ ಕಾರಣವಾಗಬಹುದು. ಇಲ್ಲೊಂದು ಹೆಬ್ಬಾವು ರಕ್ಷಣೆ ವಿಚಾರ ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದಕ್ಕೆ ಕಾರಣವಾಗಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಈ ವಾಗ್ವಾದ ನಡೆದಿದೆ.
ಹೌದು, ಕೊಟ್ಟಾಯಂ ಕಡುತುರುತಿ ಎಂಬಲ್ಲಿ ಕಾಲುವೆಯೊಂದನ್ನು ಜೆಸಿಬಿಯಿಂದ ಸ್ವಚ್ಛಗೊಳಿಸುವ ವೇಳೆ ಸುಮಾರು 15 ಮೊಟ್ಟೆಗಳೊಂದಿಗೆ ಹೆಬ್ಬಾವೊಂದು ಪತ್ತೆಯಾಗಿತ್ತು. ಸ್ಥಳೀಯರು ಈ ಹೆಬ್ಬಾವನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಕರೆ ಮಾಡಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಬರಲು ತಡವಾದ ಕಾರಣದಿಂದ ನೇರವಾಗಿ ಪೊಲೀಸ್ ಠಾಣೆಗೆ ಹಾವು ತಂದಿದ್ದರು. ಸ್ವಲ್ಪ ಹೊತ್ತು ಕಾದ ನಂತರ ಮನೆಗೆ ಹಿಂದಿರುಗಲು ಸ್ಥಳೀಯರು ಯತ್ನಿಸಿದ್ದು, ಅರಣ್ಯಾಧಿಕಾರಿಗಳು ಬರುವವರೆಗೆ ಯಾರೂ ಕೂಡಾ ಪೊಲೀಸ್ ಠಾಣೆಯಿಂದ ಹೊರಡುವಂತಿಲ್ಲ ಎಂದು ಪೊಲೀಸರು ಸ್ಥಳೀಯರಿಗೆ ತಾಕೀತು ಮಾಡಿದ್ದರು.
ಹಾವಿಗೆ ಏನಾದರೂ ಗಾಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿರುವುದರಿಂದ ಅರಣ್ಯಾಧಿಕಾರಿಗಳು ಬರುವ ಮೊದಲು ಅವರು ಹೊರಡುವಂತಿಲ್ಲ ಎಂದು ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದರು. ಇದರಿಂದ ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ಆರಂಭವಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ವಾಗ್ವಾದ ನಡೆದಿದ್ದು, ಸಂಜೆ ಅರಣ್ಯಾಧಿಕಾರಿಗಳು ಬಂದ ನಂತರ ಸಮಸ್ಯೆ ಬರೆಹರಿದಿದೆ.
ಇದನ್ನೂ ಓದಿ: 100ಕ್ಕೂ ಹೆಚ್ಚು ನಾಯಿಗಳಿಗೆ ವಿಷಕಾರಿ ಇಂಜೆಕ್ಷನ್ ಕೊಟ್ಟು ಕೊಲೆ!