ತಿರುವನಂತಪುರಂ (ಕೇರಳ): ಸರ್ಕಾರಿ ಕೆಲಸದಿಂದ ಪ್ರತಿವರ್ಷ ವಯೋಮಿತಿ ತುಂಬಿದ ಮಂದಿ ನಿವೃತ್ತಿಯಾಗುವುದು ಸಹಜ. ವರ್ಷದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳು ನೇಮಕ ಮತ್ತು ನಿವೃತ್ತಿಯಾಗುತ್ತಾರೆ. ಆದರೆ, ಈ ಬಾರಿ ಕೇರಳದಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ಈ ವರ್ಷ ಕೇರಳದ ವಿವಿಧ ಇಲಾಖೆ, ವಿಭಾಗಗಳಿಂದ ಒಟ್ಟಾರೆ 21,537 ಮಂದಿ ಸರ್ಕಾರಿ ಉದ್ಯೋಗದಿಂದ ನಿವೃತ್ತಿಯಾಗುತ್ತಿದ್ದಾರೆ. 11,801 ಮಂದಿ ಮೇ 31ರಂದು ಒಂದೇ ದಿನದಲ್ಲಿ ನಿವೃತ್ತಿಯಾಗುತ್ತಿರುವುದು ವಿಶೇಷ. ಇವರಲ್ಲಿ ಹೆಚ್ಚಿನ ಮಂದಿ ಆರೋಗ್ಯ, ಶಿಕ್ಷಣ ಮತ್ತು ಕಂದಾಯ ಇಲಾಖೆ ಉದ್ಯೋಗಿಗಳು.
ದಾಖಲೆ ನಿವೃತ್ತಿ: ಇಂದು ಸಾಮೂಹಿಕ ಸಂಖ್ಯೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳು ನಿವೃತ್ತಿಯಾಗುವುದಕ್ಕೆ ಕಾರಣವೂ ಇದೆ. ಬಹುತೇಕ ನೌಕರರು ತಮ್ಮ ವಯಸ್ಸಿನ ದೃಢೀಕರಣದಲ್ಲಿ ಜೂನ್ 1 ಎಂದೇ ತಮ್ಮ ಜನನ ದಿನಾಂಕ ನಮೂದಿಸಿದ್ದಾರೆ.
ಜೂನ್ 1ರ ಹಿಂದಿನ ಕಾರಣ: ಹಿಂದಿನ ಕಾಲದಲ್ಲಿ ಅನೇಕ ಮಂದಿಗೆ ತಾವು ಜನಿಸಿದ ವಯಸ್ಸಿನ ನಿರ್ದಿಷ್ಟ ದಿನದ ಅರಿವು ಇರುವುದಿಲ್ಲ. ಆಗ ಪೋಷಕರು ಶಾಲೆಗೆ ದಾಖಲಿಸುವಾಗ ಆ ಶೈಕ್ಷಣಿಕ ವರ್ಷಕ್ಕೆ ಹೊಂದಾಣಿಕೆ ಆಗುವಂತೆ ಜೂನ್ 1ರಂದು ಜನ್ಮದಿನವನ್ನಾಗಿ ದಾಖಲಿಸಿರುತ್ತಾರೆ. ಸಾಮಾನ್ಯವಾಗಿ ಜೂನ್ 1ರಿಂದ ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಇದೇ ಕಾರಣದಿಂದ ಅಭ್ಯರ್ಥಿ ದಿನಾಂಕ ಸರ್ಕಾರಿ ಉದ್ಯೋಗ ಸೇರಿದಾಗಲೂ ಮುಂದುವರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಇಷ್ಟು ದಾಖಲೆ ಮಟ್ಟದಲ್ಲಿ ಒಂದೇ ದಿನ ನೌಕರರು ನಿವೃತ್ತಿಯಾಗುತ್ತಿದ್ದಾರೆ.
ಹಣಕಾಸು ಇಲಾಖೆ ಮೇಲೆ ಹೊರೆ: ನಿವೃತ್ತಿಯಾಗುವ ನೌಕರರಿಗೆ ಸರ್ಕಾರ ಅವರ ನಿವೃತ್ತಿ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳು ಸೇರಿ ಒಟ್ಟು 1,500 ಕೋಟಿ ರೂಪಾಯಿಗಳು ಸರ್ಕಾರ ನೀಡಬೇಕಿದೆ. ಈ ಹಣವು ಸರ್ಕಾರದ ಮೇಲೆ ಹೊರೆ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ನೌಕರರಲ್ಲೂ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ, ನಿವೃತ್ತಿಯಾಗುತ್ತಿರುವ ನೌಕರರಿಗೆ ಎಲ್ಲ ಸವಲತ್ತುಗಳನ್ನು ನೀಡಲು ಯಾವುದೇ ಅಡ್ಡಿಯಿಲ್ಲ. ಅವರಿಗೆ ಸೇರಬೇಕಾದ ಮೊತ್ತವನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯುವುದಿಲ್ಲ. ಎಲ್ಲ ನೌಕರರಿಗೂ ಸೇರಬೇಕಾದ ಹಣದ ಮೊತ್ತ ಯಾವುದೇ ಕಡಿತವಿಲ್ಲದೇ ಸಂದಾಯವಾಗಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ನಿವೃತ್ತಿಯಾಗುತ್ತಿರುವ ಪ್ರಮುಖರಲ್ಲಿ ರಾಜ್ಯದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ ಡಿಜಿಪಿ (ಅಗ್ನಿಶಾಮಕ ದಳ) ಬಿ ಎಸ್ ಸಂಧ್ಯಾ, 3 ಡಿಜಿಪಿಗಳು ಸೇರಿದಂತೆ ಅಬಕಾರಿ ಆಯೋಗದಿಂದ ಆರ್ ಆನಂದಕೃಷ್ಣನ್, ಎಸ್‌ಪಿಜಿ ನಿರ್ದೇಶಕ ಕೇರಳ ಕೇಡರ್ ಡಿಜಿಪಿ ಅರುಣ್ ಕುಮಾರ್ ಸಿನ್ಹಾ, ಕೇರಳ ರಾಜ್ಯ ಹಣಕಾಸು ಎಂಟರ್ಪ್ರೈಸಸ್ನ ಹಿರಿಯ ಮ್ಯಾನೇಜರ್ ಆಗಿರುವ ನಟ ಮತ್ತು ಮಿಮಿಕ್ರಿ ಕಲಾವಿದ ಜೊಬಿ ಸೇರಿದ್ದಾರೆ. ಕೇರಳ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಎಸ್‌ಎಪಿ ಪರೇಡ್ ಮೈದಾನದಲ್ಲಿ ಡಿಜಿಪಿಗಳಿಗೆ ಬೀಳ್ಕೊಡುಗೆ ಪರೇಡ್ ಆಯೋಜಿಲಾಗಿದೆ.
ಇದನ್ನೂ ಓದಿ: ಕಾಸರಗೋಡಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಶ.. ಒಬ್ಬ ಆರೋಪಿ ಬಂಧನ