ಭುವನೇಶ್ವರ್: ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದರೆ ಅವು ತಮ್ಮ ಮಾಲೀಕರಿಗೋಸ್ಕರ ತಮ್ಮ ಜೀವನವನ್ನು ಪಣಕ್ಕಿಡುತ್ತವೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ನಾಗರಹಾವು ಮನೆ ಪ್ರವೇಶಿಸದಂತೆ ತಡೆಯಲು 30 ನಿಮಿಷಗಳ ಕಾಲ ಬೆಕ್ಕು ಅಡ್ಡಲಾಗಿ ನಿಂತ ಘಟನೆ ಓಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಈ ಮೂಲಕ ಬೆಕ್ಕು ತನ್ನ ಮಾಲೀಕನ ಕುಟುಂಬವನ್ನು ರಕ್ಷಿಸಿದೆ.
ಭುವನೇಶ್ವರದ ಭೀಮಾತಂಗಿ ಏರಿಯಾದಲ್ಲಿ ವಾಸವಾಗಿರುವ ಸಂಪದ್ ಕುಮಾರ ಪರೀದಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ಸಾಕಿರುವ 'ಚಿನ್ನು' ಎಂಬ ಬೆಕ್ಕು ನಾಗರಹಾವಿನ ವಿರುದ್ಧ ಹೋರಾಡಿ ಗಮನ ಸೆಳೆದಿದೆ.
ಮಂಗಳವಾರ ಸಂಜೆ ಮನೆ ಹಿಂಬದಿಯಲ್ಲಿ ನಾಗರಹಾವು ಬಂದಿರುವುದನ್ನು ನೋಡಿದ ಬೆಕ್ಕು ಓಡಿ ಹೋಗಿ ಅದರ ಎದುರು ನಿಂತಿತು. ಹಾವು ಮನೆ ಪ್ರವೇಶಿಸಲು ಯತ್ನಿಸಿದಾಗ ಬೆಕ್ಕು ಮತ್ತು ಹಾವಿನ ಮಧ್ಯೆ ಹೊರಾಟ ನಡೆದಿದೆ. ಹಾವು ಮನೆಯೊಳಗೆ ಪ್ರವೇಶಿಸಲು ಅವಕಾಶವನ್ನೇ ಕೊಟ್ಟಿಲ್ಲ. ಅದನ್ನು ನೋಡಿದ ನಾನು ತಕ್ಷಣವೇ ಉರಗ ತಜ್ಞನಿಗೆ ಕರೆ ಮಾಡಿದೆ. ಬಳಿಕ ಆತ ಬಂದು ಹಾವು ಹಿಡಿದಿದ್ದಾನೆ. ಆ ಬಳಿಕವಷ್ಟೇ ಬೆಕ್ಕು ಅಲ್ಲಿಂದ ಹೋಗಿದೆ ಎಂದು ಮನೆಯ ಮಾಲೀಕ ಸಂಪದ್ ಹೇಳುತ್ತಾರೆ.
ಸುಮಾರು ಅರ್ಧ ಗಂಟೆ ಕಾಲ ಹಾವು - ಬೆಕ್ಕಿನ ಮಧ್ಯೆ ಫೈಟ್ ನಡೆದಿದೆ. ಆದರೆ ಎರಡಕ್ಕೂ ಯಾವುದೇ ಗಾಯಗಳಾಗಿಲ್ಲ. ನಾನು ಬಂದು ಹಾವು ಹಿಡಿಯುವವರೆಗೆ ಬೆಕ್ಕು ಸ್ಥಳದಲ್ಲೇ ಇತ್ತು ಎಂದು ಉರಗ ತಜ್ಞ ಇದೇ ವೇಳೆ ತಿಳಿಸಿದ್ದಾನೆ.