ರೇವಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನಗೆ ಗುಂಡು ಮಗು ಆಗಬೇಕೆಂಬ ಇಚ್ಛೆ ಪೂರೈಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವಿಗೆ ನರ ಬಲಿ ಕೊಟ್ಟಿದ್ದಾನೆ. ದೇವಿಯ ವಿಗ್ರಹದ ಕೆಳಗಡೆ ದಿವ್ಯಾಂಶು ಎಂಬ 18 ವರ್ಷದ ಯುವಕನ ಶವ ಪತ್ತೆಯಾದ ನಂತರ ಈ ಘಟನೆ ಬಯಲಿಗೆ ಬಂದಿದೆ.
ರೇವಾ ಜಿಲ್ಲೆಯ ಬೇಧೋವಾ ಗ್ರಾಮದ ನಿವಾಸಿ ರಾಮ್‌ಲಾಲ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ರಾಮ್ಲಾಲ್ಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತನಗೆ ಗಂಡು ಮಗು ಆಗಬೇಕೆಂದು ಬಯಸುತ್ತಿದ್ದ. ಇದಕ್ಕಾಗಿ ಗ್ರಾಮದ ದೇವಿಯ ಬಳಿ ಹರಕೆ ಹೊತ್ತುಕೊಂಡಿದ್ದ ರಾಮ್‌ಲಾಲ್ ಗಂಡು ಮಗುವಾದರೆ ನರ ಬಲಿ ಕೊಡುವುದಾಗಿ ಪ್ರತಿಜ್ಞೆ ಮಾಡಿದ್ದನಂತೆ.
ಗರ್ಭಿಣಿಯಾಗಿದ್ದ ಪತ್ನಿ ಇತ್ತೀಚಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂತೆಯೇ, ಈತ ದೇವಿಯು ತನ್ನ ಇಚ್ಛೆ ಪೂರೈಸಿದ ಹಿನ್ನೆಲೆಯಲ್ಲಿ ದೇವಿಯನ್ನು ಸಮಾಧಾನಪಡಿಸಲು ನರ ಬಲಿ ಕೊಡಲು ಹುಡುಕುತ್ತಿದ್ದನಂತೆ. ಜುಲೈ 6ರಂದು ದಿವ್ಯಾಂಶು ಎಂಬ ಯುವಕ ಮೇಕೆಗಳನ್ನು ಮೇಯಿಸುತ್ತಿದ್ದ.
ಇದನ್ನು ಕಂಡ ರಾಮ್‌ಲಾಲ್ ಯಾವುದೋ ಸಹಾಯ ಬೇಡುವ ನೆಪದಲ್ಲಿ ದಿವ್ಯಾಂಶ್‌ನನ್ನು ಕರೆದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿ ಆ ಯುವಕನನ್ನು ರಾಮಲಾಲ್ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೇ, ದೇವಿಯ ವಿಗ್ರಹದ ಕೆಳಗಡೆಯೇ ಶವವನ್ನು ಹೂತು ಹಾಕಿ ಬಂದಿದ್ದಾನೆ.
ಆದರೆ, ನಂತರ ದೇವಸ್ಥಾನದಲ್ಲಿ ಮೃತ ದೇಹ ಕಾಣಿಸಿಕೊಂಡಿದೆ. ಅಂತೆಯೇ ಪೊಲೀಸರು ಶವವನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ. ಆಗ ದಿವ್ಯಾಂಶ್ ಕೊನೆಯದಾಗಿ ರಾಮ್‌ಲಾಲ್‌ನೊಂದಿಗೆ ಕಾಣಿಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪೊಲೀಸರು ರಾಮ್ಲಾಲ್ನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಹಂತಕ ಪೊಲೀಸರ ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ. ನಂತರ ತಾನೇ ಯುವಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ನನಗೆ ಮೂವರು ಹೆಣ್ಣು ಮಕ್ಕಳಿದ್ದು, ಗಂಡು ಮಗುವೇ ಬೇಕು ಎಂದು ದೇವಿ ಬಳಿ ಕೇಳಿದ್ದೆ. ಗಂಡು ಮಗುವಿಗಾಗಿ ಯುವಕನೊಬ್ಬನನ್ನು ಬಲಿಕೊಡಬೇಕೆಂದು ಶಾಸ್ತ್ರದಲ್ಲಿ ಹೇಳಿತ್ತು. ಕಳೆದ ತಿಂಗಳು ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಲಿ ಕೊಡಲು ಯುವಕನನ್ನು ಹುಡುಕುತ್ತಿದ್ದಾಗ ದಿವ್ಯಾಂಶ್ ಕಣ್ಣಿಗೆ ಬಿದ್ದಿದ್ದ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ರಾಮಲಾಲ್ ಮಾಟಮಂತ್ರದಲ್ಲಿ ತೊಡಗಿದ್ದ ಎಂದು ಗ್ರಾಮಸ್ಥರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: ಉಡುಪಿ: ಕಾರು ಸುಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಂಚಿಗೆ ಬಲಿಯಾದ ಅಮಾಯಕ ಮೇಸ್ತ್ರೀ