ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೋವಿಡ್ ಲಸಿಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ನಿರಂತರವಾಗಿ ಲಸಿಕೆ ಪಡೆಯಲು ಜನರನ್ನು ಒತ್ತಾಯಿಸುತ್ತಿದೆ. ಆದ್ರೆ ಇಲ್ಲೊಂದು ಲಸಿಕೆ ಹಾಕಿಸಿಕೊಳ್ಳುವ ಕೇಂದ್ರದಲ್ಲೇ ಮದುವೆ ಮಾಡಿಕೊಳ್ಳುತ್ತಿರುವುದು ದುರಂತವೇ ಸರಿ.
ಹೌದು, ಮುಂಬೈನ ಎಲ್ಲಾ ವಾರ್ಡ್‌ಗಳಲ್ಲಿ ಈಗ ಲಸಿಕೆ ಕೇಂದ್ರವನ್ನು ತೆರೆಯಲಾಗಿದೆ. ಇದರಲ್ಲಿ ಕಂಡಿವಳಿ ಲೋಖಂಡ್ವಾಲಾದ 27ನೇ ವಾರ್ಡ್ನಲ್ಲಿ ಮೇ 12ರಂದು ಬಿಜೆಪಿ ಕಾರ್ಪೋರೇಟರ್ ಸುರೇಖಾ ಪಾಟೀಲ್ ಅವರ ನೇತೃತ್ವದಲ್ಲಿ ಅಲಿಕಾ ನಗರ ಸಭಾಂಗಣದಲ್ಲಿ ಲಸಿಕೆ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಮಯದಲ್ಲಿ ಅನೇಕ ಹಿರಿಯ ಬಿಜೆಪಿ ನಾಯಕರು ಸಹ ಹಾಜರಿದ್ದರು.
ಲಸಿಕೆ ಕೇಂದ್ರ ತೆರೆದ ನಂತರ ಈಗ ಜನರು ತಮ್ಮ ಮೊಬೈಲ್ ಅಪ್ಲಿಕೇಶನ್ ಆರೋಗ್ಯ ಸೇತು ಮೂಲಕ ಎರಡನೇ ಡೋಸ್ ಲಸಿಕೆಗಾಗಿ ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸ್ಲಾಟ್ ಕಂಡುಬಂದಿದೆ. ಆದರೆ ಜನರು ಅಲಿಕಾ ನಗರ ಲಸಿಕೆ ಕೇಂದ್ರ ತಲುಪಿದಾಗ ಮದುವೆ ನಡೆಯುತ್ತಿರುವುದು ಕಂಡು ಆಶ್ಚರ್ಯಗೊಂಡರು.
ಈ ಸಭಾಂಗಣದಲ್ಲಿ ಬಿಜೆಪಿ ಮುಖಂಡರು ಲಸಿಕೆ ಕೇಂದ್ರವನ್ನು ತೆರೆದಿದ್ದರು. ಇಲ್ಲಿ ಪ್ರತಿದಿನ 200 ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದ್ದರು. ಆದರೆ ಲಸಿಕೆ ಕೇಂದ್ರದಲ್ಲಿ ಮದುವೆಯಾಗುತ್ತಿರುವುದನ್ನು ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಜನರು ಲಸಿಕೆ ಹಾಕಿಸಿಕೊಳ್ಳದೇ ತಮ್ಮ ತಮ್ಮ ಮನೆಗಳಿಗೆ ವಾಪಸಾದರು.