ಧೌಲಪುರ( ರಾಜಸ್ಥಾನ): ವ್ಯಕ್ತಿಯೊಬ್ಬರು ತನಗೆ ಬಾಯಾರಿಕೆಯಾಗಿದ್ದರಿಂದ ಗ್ಲಾಸ್ನಲ್ಲಿ ಇಟ್ಟಿದ್ದ ಆ್ಯಸಿಡ್ ಅನ್ನು ನೀರು ಎಂದು ತಿಳಿದು ಕುಡಿದ ಘಟನೆ ರಾಜಸ್ಥಾನದ ಸೈಪೌ ಪೊಲೀಸ್ ಠಾಣಾ ವ್ಯಾಪ್ತಿಯ ತಾಸಿಮೋನ್ ಪಟ್ಟಣದಲ್ಲಿ ನಡೆದಿದೆ.
ಗ್ಲಾಸ್ನಲ್ಲಿ ಆ್ಯಸಿಡ್ ಇರುವುದು ಗೊತ್ತಾಗದೇ ಕುಡಿದಿದ್ದರಿಂದ ವ್ಯಕ್ತಿ ತಕ್ಷಣವೇ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾನೆ. ರಕ್ತ ವಾಂತಿ ಮಾಡಿಕೊಂಡಿದ್ದರಿಂದ ಸಂಬಂಧಿಕರು ವ್ಯಕ್ತಿಯನ್ನು ತಕ್ಷಣ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದಿದ್ದು ಹೇಗೆ?: ಮನೆಯ ಕ್ಲೀನಿಂಗ್ಗಾಗಿ ಗ್ಲಾಸ್ಗೆ ಆ್ಯಸಿಡ್ ಹಾಕಿದ್ದೆ ಎಂದು ಲವ್ ಕುಶ್ (40) ಎಂಬುವರ ಪತ್ನಿ ರೇಖಾ ಹೇಳಿದ್ದಾರೆ. ಪತಿ ಅಂಗಡಿಯಿಂದ ಮನೆಗೆ ಬಂದಿದ್ದರು. ಈ ವೇಳೆ ತುಂಬಾ ಬಾಯಾರಿಕೆಯಾಗಿದ್ದರಿಂದ ನೀರಿನ ಬದಲು ಗ್ಲಾಸ್ ನಲ್ಲಿಟ್ಟಿದ್ದ ಆ್ಯಸಿಡ್ ಕುಡಿದಿದ್ದಾರೆ ಎಂದು ಘಟನೆಯ ವಿವರ ನೀಡಿದರು. ಆ್ಯಸಿಡ್ ಕುಡಿದಿದ್ದರಿಂದ ಅವರಿಗೆ ತಕ್ಷಣವೇ ರಕ್ತ ವಾಂತಿಯಾಗತೊಡಗಿತ್ತು. ಸುತ್ತಮುತ್ತಲಿನವರನ್ನು ಕರೆದು ಆಸ್ಪತ್ರೆಗೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಆ್ಯಸಿಡ್ ಕುಡಿದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಕೇಶವ ತಿಳಿಸಿದ್ದಾರೆ. ಅವರನ್ನು ಮೇಲ್ ವೈದ್ಯಕೀಯ ವಾರ್ಡ್‌ಗೆ ದಾಖಲಿಸಲಾಗಿದೆ. ಸದ್ಯ ಈ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ