ತಂಗಲ್ಲಪಲ್ಲಿ(ತೆಲಂಗಾಣ): ಕೊಲೆ, ಆತ್ಮಹತ್ಯೆ ಸೇರಿ ಅನುಮಾನಾಸ್ಪದ ಪ್ರಕರಣಗಳಲ್ಲಿ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದು ಸಾಮಾನ್ಯ. ಆದರೆ ಕೆಲವೆಡೆ ಮರಣೊತ್ತರ ಪರೀಕ್ಷೆಯನ್ನು ಕೆಲವರು ಒಪ್ಪುವುದಿಲ್ಲ. ಇಂತಹದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ಮಾಡಬಾರದೆಂದು ಚಿಕ್ಕಪ್ಪನ ಶವ ಹೊತ್ತು ವ್ಯಕ್ತಿಯೊಬ್ಬ ಸ್ಮಶಾನದತ್ತ ಓಡಿ ಹೋದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಶವ ಹೊತ್ತು ಸ್ಮಶಾನದತ್ತ ಓಡಿಹೋದ ಮಗ: ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದಲ್ಲೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಈ ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೃತರ ಸಂಬಂಧಿಕನೊಬ್ಬ ಶವ ಹೊತ್ತುಕೊಂಡು ಓಡಿ ಹೋಗಿರುವ ವಿಚಿತ್ರ ಘಟನೆ ಶುಕ್ರವಾರ ನಡೆದಿದೆ. ನಂತರ ಪೊಲೀಸರು ಆತನನ್ನು ಹಿಡಿದು, ಶವವನ್ನು ತೆಗೆದುಕೊಂಡು ಹೋಗಿ ಶವಪರೀಕ್ಷೆ ನಡೆಸಿದ್ದಾರೆ.
ಪೊಲೀಸರು ಮತ್ತು ಗ್ರಾಮಸ್ಥರು ಹೇಳುವ ಪ್ರಕಾರ, ತಂಗಲ್ಲಪಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ಜಡಲ ಮಲ್ಲಯ್ಯ (65) ಎಂಬ ವ್ಯಕ್ತಿ ಶುಕ್ರವಾರ ಬೆಳಿಗ್ಗೆ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಅದೇ ವೇಳೆಗೆ ಅಪರಿಚಿತರು ನೀಡಿದ ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರಿಸಿಲ್ಲಕ್ಕೆ ರವಾನಿಸುವಂತೆ ಸೂಚಿಸಿದ್ದರು. ಮಲ್ಲಯ್ಯನ ಕುಟುಂಬಸ್ಥರು ಇದಕ್ಕೆ ಆಖ್ಷೇಪ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪೊಲೀಸರು ಮಾತನಾಡುತ್ತಿರುವಾಗಲೇ ಮಲ್ಲಯ್ಯನ ಅಣ್ಣನ ಮಗ ರಾಜು, ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋಗಿದ್ದಾನೆ.
ಶವವನ್ನು ಹಿಡಿದು ಓಡುತ್ತಿದ್ದ ಆತನನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆಗ ಆತ ಮಲ್ಲಯ್ಯನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆವರ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾವಿಲ್ಲ ಎಂದು ಹೇಳಿಕೊಂಡೆ ಸ್ಮಶಾನದ ಕಡೆಗೆ ಓಡಿಹೋಗಿದ್ದಾನೆ. ಆದರೂ ಬಿಡದೇ ಆತನನ್ನು ಬೆನ್ನಟ್ಟಿದ ಪೊಲೀಸರು, ಹಿಡಿದು ಆತನ ಹೆಗಲ ಮೇಲೆ ಇದ್ದ ಮೃತದೇಹವನ್ನು ತೆಗೆದುಕೊಂಡು ಸಿರಿಸಿಲ್ಲಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೆಡ್ ಕಾನ್ಸ್ಟೆಬಲ್ ಸಾಂಬಶಿವರಾವ್ ತಿಳಿಸಿದ್ದಾರೆ. ಗುರುವಾರ ರಾತ್ರಿ ಕುಟುಂಬದವರೆಲ್ಲರೂ ಸೇರಿ ಊಟ ಮಾಡಿ ಮಲಗಿದ್ದರು ಎಂದು ಮಲ್ಲಯ್ಯನ ಪತ್ನಿ ಚಂದ್ರವ್ವ ಪೊಲೀಸರಿಗೆ ತಿಳಿಸಿದ್ದಾರೆ. ಯಾರ ಮೇಲೂ ಅನುಮಾನ ಬಂದಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಣ್ಣನನ್ನು ಕೊಂದ ತಮ್ಮ: ರಾಯಚೂರಿನ ಮಾನವಿ ಪಟ್ಟಣದಲ್ಲಿ ತಮ್ಮನೊಬ್ಬ, ಅಣ್ಣ ದಿನ ನಿತ್ಯ ಕುಡಿದು ಬಂದು ಕಿರಿ ಮಾಡುತ್ತಿದ್ದ ಎಂದು ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಆರೋಪಿ ಭೀಮಾಶಂಕರ್ ಎಂಬವನು ಅಣ್ಣ ಪರಿಷತ್ ರಾಜ್ ಕಿರಿ ಕಿರಿಯಿಂದ ರೋಸಿ ಹೋಗಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಮಾನವಿ ಪೊಲೀಸರು ಬಂಧಿಸಿದ್ದು, ಮೃತಪಟ್ಟ ವ್ಯಕ್ತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕುಡಿದು ಕಿರಿಕಿರಿ ಮಾಡುತ್ತಿದ್ದ ಅಣ್ಣನನ್ನೇ ಹತ್ಯೆ ಮಾಡಿದ ತಮ್ಮ