ಮೇದಕ್: ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತುಕೊಂಡು ಆಹಾರ ತಿನ್ನುತ್ತಲೇ ಪ್ರಾಣ ಬಿಟ್ಟ ಘಟನೆ ಅಲ್ಲಾಪೂರ ಗ್ರಾಮದ ಬಳಿ ನಡೆದಿದೆ.
ಸಿದ್ದಿಪೇಟ ಜಿಲ್ಲೆಯ ದಂಡುಪಲ್ಲಿ ಗ್ರಾಮದ ಕಾಸಾಲ ಸಾಯಿಲು (46) ಮೇದಕ್ ಜಿಲ್ಲೆಯ ಪಾಲಟ ಗ್ರಾಮದಲ್ಲಿ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದರು. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ಕಾರ್ಯಕ್ರಮ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಮದ್ಯ ಕುಡಿಯಲು ಅಲ್ಲಾಪೂರ ಗ್ರಾಮಕ್ಕೆ ತೆರಳಿದ್ದರು. ಸಾರಾಯಿ ಮತ್ತು ತಿನ್ನಲು ಆಹಾರವನ್ನು ತೆಗೆದುಕೊಂಡು ತೂಪ್ರಾನ್-ಗಜ್ವೇಲ್ ಹೆದ್ದಾರಿ ಪಕ್ಕದ ಹೊಲವೊಂದಕ್ಕೆ ಹೋಗಿದ್ದಾರೆ.
ಹೊಲದಲ್ಲಿ ಮದ್ಯದ ಜೊತೆ ಆಹಾರ ತಿನ್ನುತ್ತಿದ್ದ ವೇಳೆ ಏಕಾಏಕಿ ಬಾಯಿಯಿಂದ ರಕ್ತ ಕಕ್ಕಿ ಪ್ರಾಣ ಬಿಟ್ಟಿದ್ದಾರೆ. ಶುಕ್ರವಾರವಾದ್ರೂ ಸಾಯಿಲು ಮನೆಗೆ ಬರದ ಹಿನ್ನೆಲೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬಸ್ಥರು ಮತ್ತು ಪೊಲೀಸರು ಶೋಧ ನಡೆಸುತ್ತಿದ್ದಾಗ ಸಾಯಿಲು ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸಾಯಿಲುಗೆ ಮಕ್ಕಳಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದೆ.