ಕಿಶನ್‌ಗಂಜ್(ಬಿಹಾರ): ಈ ದುಬಾರಿ ದುನಿಯಾದಲ್ಲಿ ಒಂದು ಮದುವೆಯಾಗಿ ಜೀವನ ನಡೆಸುವುದೇ ಕಷ್ಟ ಕಷ್ಟ ಅನ್ನುವವರೇ ಹೆಚ್ಚು. ಆದರೆ, ಈ ಇಲ್ಲೋರ್ವ ಮಹಾಶಯ ಈ ಮಾತಿಗೆ ಅಪವಾದ ಎಂಬಂತಿದ್ದಾನೆ. ಹೌದು, ಬರೋಬ್ಬರಿ 12 ಮದುವೆಯಾಗಿದ್ದ ಈತ 13ನೇ ವಿವಾಹಕ್ಕೆ ಸಿದ್ಧತೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ. ಬಾಲಕಿಯನ್ನು ಅಪಹರಿಸಿ ವಿವಾಹಕ್ಕೆ ಮುಂದಾಗಿದ್ದ ಈತನೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಅನಾರ್ಕಲಿ ಗ್ರಾಮದ ನಿವಾಸಿಯಾದ ಶಂಶಾದ್ ಬಂಧಿತ ವ್ಯಕ್ತಿ. ಶಂಶಾದ್ ಪುರ್ನಿಯಾ ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಮದುವೆಗೆ ಸಿದ್ಧನಾಗಿದ್ದಾಗ ಪೊಲೀಸರು ದಾಳಿ ಮಾಡಿ ಈತನನ್ನು ಬಂಧಿಸಿದ್ದಾರೆ.
12 ಹೆಂಡತಿಯರ ಗಂಡ: ಚಪಲ ಚನ್ನಿಗರಾಯ ಶಂಶಾದ್ ವಿರುದ್ಧ 2015 ರಲ್ಲಿ ಬಾಲಕಿ ಅಪಹರಣ ಮಾಡಿದ ಕೇಸ್ ದಾಖಲಾಗಿತ್ತು. ಅಂದಿನಿಂದಲೂ ಪೊಲೀಸರಿಗೆ ಬೇಕಾಗಿದ್ದ ಈತ ತನ್ನ ವಿರುದ್ಧ ದೂರು ನೀಡಿದ ಬಾಲಕಿಯನ್ನೇ ಮತ್ತೆ ಅಪಹರಿಸಿದ್ದ. ಅಲ್ಲದೇ, ಆಕೆಯೊಂದಿಗೆ ಮದುವೆಗೆ ಸಿದ್ಧನಾಗಿದ್ದ. ಈ ವಿಷಯ ತಿಳಿದ ಪೊಲೀಸರು ಆತನನ್ನು ಹೆಡೆಮುರಿ ಕಟ್ಟಿದ್ದಾರೆ.
ವಿಚಾರಣೆ ವೇಳೆ ಆತ ತನಗೆ ಈಗಾಗಲೇ 12 ಮದುವೆಗಳಾಗಿವೆ ಎಂದು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎಂಬುದು ಸೋಜಿಗದ ಸಂಗತಿ. ಈ ಬಗ್ಗೆ ಪೊಲೀಸರು ಆತನ ಪತ್ನಿಯರನ್ನು ಸಂಪರ್ಕಿಸಿದಾಗ ಇವರ್ಯಾರಿಗೂ ತಾವು ಮೋಸ ಹೋದ ಬಗ್ಗೆ ಮಾಹಿತಿಯೇ ಇಲ್ಲವೆಂದು ತಿಳಿಸಿದ್ದಾರೆ.
ಇದೀಗ ತನ್ನನ್ನು ಅಪಹರಣ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದ ಬಾಲಕಿಯನ್ನು ವರಿಸಲು ಮುಂದಾಗಿದ್ದು, ಅದೃಷ್ಟವಶಾತ್ ಆಕೆ ಈತನ ಕೃತ್ಯದಿಂದ ಬಚಾವಾಗಿದ್ದಾಳೆ. ಶಂಶಾದ್ನನ್ನು ಬಂಧಿಸಿದ ಪೊಲೀಸರು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಓದಿ: ಕೀಚಕರ ದುಷ್ಕೃತ್ಯ.. ಲಿಫ್ಟ್ ಕೊಡುವುದಾಗಿ ಕಾರಿನಲ್ಲಿ ತಾಯಿ-ಮಗಳ ಮೇಲೆ ಗ್ಯಾಂಗ್ರೇಪ್