ಲುಂಗೇಲಿ(ಮಿಜೋರಾಂ): 'ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ' ಎಂಬ ಗಾದೆ ಇದೆ. ಆದರೆ ಕೆಲವೊಮ್ಮೆ ಈ ಜಗಳ ಅತಿರೇಕಕ್ಕೆ ಹೋಗಿ ಅನಾಹುತಗಳು ಸಂಭವಿಸಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಸದ್ಯ ಅಂತಹದೊಂದು ಘಟನೆ ಮಿಜೋರಾಂನಲ್ಲಿ ನಡೆದಿದೆ.
ಹೆಂಡತಿ ಮೇಲಿನ ಕೋಪದಿಂದಾಗಿ ಗಂಡನೊಬ್ಬ ಬಟ್ಟೆಯೊಳಗೆ ಆತ್ಮಾಹುತಿ ಬಾಂಬ್ ಇಟ್ಟುಕೊಂಡು ಆಕೆಯನ್ನ ತಬ್ಬಿಕೊಂಡಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಇಬ್ಬರೂ ಈ ಘಟನೆ ವೇಳೆ ಸಾವನ್ನಪ್ಪಿದ್ದಾರೆ.
ಮಿಜೋರಾಂನ ಲುಂಗೇಲಿಯ ಹೈಪವರ್ ಕಮಿಟಿ ಕಚೇರಿಯ ಎದುರಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 12:15ರ ವೇಳೆ ಈ ಬಾಂಬ್ ಸ್ಫೋಟಗೊಂಡಿದ್ದು, 61 ವರ್ಷದ ವ್ಯಕ್ತಿ ರೋಹ್ಮಿಂಗ್ಲಿಯಾನ್ ಹಾಗೂ ಆತನ ಪತ್ನಿ ತಲಾಂಗ್ ಥಿಯಾಂಗಲಿಮಿ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಭಯೋತ್ಪಾದಕ ಸಂಘಟನೆಗಳು ಈ ಕೃತ್ಯವೆಸಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ, ಸೂಕ್ತ ತನಿಖೆ ನಡೆಸಿದಾಗ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿರಿ: ಇದೆಂಥಾ ಹುಚ್ಚಾಟ? ಕಾಳಿಂಗ ಸರ್ಪದೊಂದಿಗೆ ಆಟವಾಡಲು ಹೋಗಿ ಸಾವನ್ನಪ್ಪಿದ ವ್ಯಕ್ತಿ!
ರೋಹ್ಮಿಂಗ್ಲಿಯಾನ್ ಹಾಗೂ ಥಿಯಾಂಗಲಿಮಿ ಕಳೆದ ಒಂದು ವರ್ಷದ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಹೀಗಾಗಿ ಇಬ್ಬರು ಬೇರೆ ಬೇರೆಯಾಗಿಯೇ ವಾಸ ಮಾಡುತ್ತಿದ್ದರು.
ಆದರೆ, ನಿನ್ನೆ ಮಾಜಿ ಪತ್ನಿ ಇದ್ದ ಸ್ಥಳಕ್ಕೆ ಹೋಗಿರುವ ವ್ಯಕ್ತಿ ಆಕೆಯನ್ನ ತಬ್ಬಿಕೊಂಡು ಬಾಂಬ್ ಬ್ಲಾಸ್ಟ್ ಮಾಡಿಕೊಂಡಿದ್ದಾನೆ. ಹೀಗಾಗಿ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ನೀಡಿದ್ದು, ಸ್ಫೋಟಕದಲ್ಲಿ ಜಿಲಿಟಿನ್ ಬಳಕೆ ಮಾಡಲಾಗಿದೆ ಎಂದಿದ್ದಾರೆ.