ಪಾಟ್ನಾ: ಆಮ್ಲೆಟ್ ಮಾಡಿಕೊಡದ ಪತ್ನಿಯನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಿವೃತ್ತ ಸಬ್ ಇನ್ಸ್ಪೆಕ್ಟರ್ ಮಗ ಅಜಿತ್ ಸಿಂಗ್ ಎಂಬಾತ ಈ ಕೃತ್ಯವನ್ನೆಸಗಿದ್ದು, ಪತ್ನಿಯನ್ನು ಕೊಂದ ನಂತರ ದೇಹವನ್ನು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.
ಆರೋಪಿಯ ತಂದೆ ರಾಮ್ ವಿನಯ್ ಸಿಂಗ್ ಅವರ ಹೇಳಿಕೆಯನ್ನಾಧರಿಸಿ ಅಜಿತ್ ಸಿಂಗ್ ವಿರುದ್ಧ ಸೀತಾಮಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
"ನನ್ನ ಮಗ ಒಬ್ಬ ಮದ್ಯವ್ಯಸನಿಯಾಗಿದ್ದಾನೆ. ಅವನು ಗುರುವಾರ ಸಂಜೆ ಕುಡಿದು ಮನೆಗೆ ಬಂದಿದ್ದ. ಬರುವಾಗ ಮೊಟ್ಟೆಗಳನ್ನು ಖರೀದಿಸಿ ತಂದಿದ್ದ, ಆತ ಪತ್ನಿ ನೀತು ಸಿಂಗ್ಗೆ(30) ಆಮ್ಲೆಟ್ ಮಾಡಿಕೊಡುವುದಕ್ಕೆ ಹೇಳಿದ. ನೀತು ಗುರುವಾರ ಅಡುಗೆ ಮನೆಯಲ್ಲಿ ಮಾಂಸಹಾರದ ಅಡುಗೆಯನ್ನು ತಯಾರಿಸುವುದಿಲ್ಲ ಎಂದು ಹೇಳಿದಳು. ಇದು ಅವರಿಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು" ಎಂದು ರಾಮ್ ವಿನಯ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.
ಪತಿಯ ದಿನನಿತ್ಯ ಕುಡಿಯುವ ಅಭ್ಯಾಸದಿಂದ ನೀತು ಬೇಸರಗೊಂಡಿದ್ದಳು. ಈ ಹಿಂದಿನಂತೆ ಮದ್ಯ ಸೇವಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಕೆ, ಗುರುವಾರವೂ ಹಾಗೆಯೇ ಮಾಡಿದಳು. ಇದರಿಂದ ಕೋಪಗೊಂಡ ಅಜಿತ್ ಮಲಗುವ ಕೋಣೆಯೊಳಗೆ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಂತರ ಕತ್ತು ಹಿಸುಕಿ ಕೊಂದು ಸೀಲಿಂಗ್ ಫ್ಯಾನ್ಗೆ ನೇಣು ಹಾಕಿದ್ದಾನೆ.
ಸ್ವಲ್ಪ ಸಮಯದ ನಂತರ, ನೀತು ಕಿರುಚುವುದನ್ನು ನಿಲ್ಲಿಸಿದಳು. ಅವರಿಬ್ಬರು ಜಗಳ ನಿಲ್ಲಿಸಿರಬಹುದು ಎಂದುಕೊಂಡಿದ್ದೆ. ಆದರೆ ಸ್ವಲ್ಪ ಸಮಯದ ನಂತರ ಅಜಿತ್ ಬೆಡ್ರೂಮ್ನಿಂದ ಹೊರಬಂದವನೇ ಇಲ್ಲಿಂದ ಪರಾರಿಯಾದ. ನಾನು ರೂಮ್ಗೆ ಹೋಗಿ ನೋಡುವಷ್ಟರಲ್ಲಿ ನೀತು ಫ್ಯಾನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ಮಗನ ವಿರುದ್ಧವೇ ರಾಮ್ ವಿನಯ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಛತ್ತೀಸ್ಗಢದಲ್ಲಿ ಖಾಸಗಿ ಆಸ್ಪತ್ರೆಗಳಿಂದ ನರಮೇಧ ಆರೋಪ.. 3 ವರ್ಷದಲ್ಲಿ 3 ಸಾವಿರ ಮಹಿಳೆಯರು ಸಾವು!