ಕೃಷ್ಣಗಿರಿ(ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗುರುಪರಪಲ್ಲಿ ಬಳಿ ಕರ್ನಾಟಕದ ಕೆಎಸ್ಆರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ, ಅಪಘಾತದಲ್ಲಿ ಬೈಕ್ ಸವಾರರು ಇಬ್ಬರು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಎಸ್ಆರ್ಟಿಸಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಗುರುಪರಪಲ್ಲಿ ಸಮೀಪ ಇರುವ ಒಟ್ಟೆರ್ ಗ್ರಾಮದ ಯೋಧ ಸುಂದರೇಶನ್ ಹಾಗೂ ಅದೇ ಗ್ರಾಮದ ರೈತ ಗಣೇಶನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು, ಇದೇ ಸಂದರ್ಭದಲ್ಲಿ ಯೋಧ ಸುಂದರೇಶನ್ ಅವರು ಗುರುಪಾರಪಳ್ಳಿ ಪಕ್ಕದ ಗ್ರಾಮ ಪೊಲುಪಲ್ಲಿ ತಲುಪಲು ತನ್ನ ದ್ವಿಚಕ್ರ ವಾಹನದಲ್ಲಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟಲು ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಬೆಂಗಳೂರಿನಿಂದ ತಿರುಕೋವಿಲೂರು ಮಾರ್ಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ದಾಟುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ಬೈಕ್ ಸವಾರರು ಬಸ್ಸಿನ ಅಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ ಬಸ್ಸಿನ ಅಡಿ ಸಿಲುಕಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ವೇಗವಾಗಿ ಹರಡಿ ಕೆಎಸ್ಆರ್ಟಿಸಿ ಬಸ್ಸಿನಾದ್ಯಂತ ವ್ಯಾಪಿಸಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಬಸ್‌ನಿಂದ ಕೆಳಗಿಳಿದು ಹೊರ ನಡೆದರು.
ನಂತರ ಬೆಂಕಿ ವೇಗವಾಗಿ ಬಸ್ಸಿನಾದ್ಯಂತ ವ್ಯಾಪಿಸಿ ಇಡೀ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕೃಷ್ಣಗಿರಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ಆರಿಸುವಷ್ಟರಲ್ಲಿ ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾದ ನಂತರ ಬೆಂಕಿ ನಂದಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಪೊಲೀಸರು ಹೊರತೆಗೆದು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ ಅಪಘಾತದ ಕುರಿತು ಗುರುಪರಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಘಡದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರಸ್ತೆ ದಾಟಲು ಯತ್ನಿಸುತ್ತಿದ್ದ ಸೇನಾ ಯೋಧ ಹಾಗೂ ರೈತನ ಮೇಲೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದ ಸ್ಥಳದಲ್ಲಿ ಸಂಚಲನ ಮೂಡಿಸಿದೆ.
ಅಲ್ಲದೇ ಈ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತದಿಂದಾಗಿ ಚೆನ್ನೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!