ತೆಲಂಗಾಣ, ಆಂಧ್ರಪ್ರದೇಶ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮ ತೆಲುಗು ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ನಿನ್ನೆಯಿಂದ ಮಳೆ ಕಡಿಮೆಯಾದರೂ ಪ್ರವಾಹದ ಹರಿವು ಕಡಿಮೆಯಾಗುತ್ತಿಲ್ಲ. ಪ್ರತ್ಯೇಕ ಘಟನೆಯಲ್ಲಿ ತಿಮಿಂಗಿಲವೊಂದು ಸತ್ತು ದಡ ಸೇರಿದರೆ, ಇನ್ನೊಂದು ಘಟನೆಯಲ್ಲಿ ಹಳ್ಳ ದಾಟುತ್ತಿದ್ದ ವೇಳೆ ಕೆಲ ಕುರಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ತಿಮಿಂಗಿಲ ಕಂಡ ಹೌಹಾರಿದ ಜನ: ಸಮುದ್ರ ಜೀವಿಗಳೂ ಸಹ ತತ್ತರಿಸಿವೆ. ಇತ್ತೀಚೆಗೆ ಗುರುವಾರ ಸಂಜೆ ಶ್ರೀಕಾಕುಳಂ ಜಿಲ್ಲೆಯ ಸಂತಬೊಮ್ಮಲಿ ತಾಲೂಕಿನ ಪಾತ ಮೇಘವರಂ ಮತ್ತು ಡಿ.ಮರುವಾಡ ಕಡಲತೀರಗಳ ನಡುವೆ ಬೃಹತ್ ನೀಲಿ ತಿಮಿಂಗಿಲವು ದಡದಲ್ಲಿ ಸತ್ತು ಬಿದ್ದಿದೆ. ಈ ನೀಲಿ ತಿಮಿಂಗಲವು ಇದು ಸುಮಾರು 24 ಅಡಿ ಉದ್ದ ಮತ್ತು ಸುಮಾರು ಮೂರು ಟನ್ ತೂಕವಿದೆ. ದಡಕ್ಕೆ ಕೊಚ್ಚಿ ಬಂದಾಗ ಅದು ಮೃತಪಟ್ಟಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಬೃಹತ್ ಗಾತ್ರದ ಮೀನನ್ನು ಕಾಣುವ ಈ ನೀಲಿ ತಿಮಿಂಗಿಲವನ್ನು ನೋಡಲು ಸಮೀಪದ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ್ದರು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರಭಾವದಿಂದ ಕಳೆದೊಂದು ವಾರದಿಂದ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಬೀಸುತ್ತಿವೆ. ಈ ಅನುಕ್ರಮದಲ್ಲಿ ಈ ತಿಮಿಂಗಿಲ ಸಾವನ್ನಪ್ಪಿರಬಹುದು ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಂಧ್ರದಲ್ಲಿ ಭಾರಿ ಮಳೆ: ಮಳೆಯಿಂದಾಗಿ ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿವೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಗುಂಡಿಗಳಾಗಿ ಮಾರ್ಪಟ್ಟಿವೆ ಎಂದು ವಾಹನ ಸವಾರರು ದೂರುತ್ತಿದ್ದಾರೆ. ತಗ್ಗು ಪ್ರದೇಶದ ಜನರು ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುತ್ತಿದ್ದಾರೆ.
ನೂರಾರು ಮನೆಗಳು ಮುಳುಗಡೆ: ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆ ಕ್ಷೇತ್ರದಲ್ಲಿ ಸುಮಾರು 5 ಸಾವಿರ ಎಕರೆ ಬೆಳೆ ಮುಳುಗಡೆಯಾಗಿದೆ. ಕೋಮರ್ತಿ ಅಂಗನವಾಡಿ ಕೇಂದ್ರಕ್ಕೆ ಪ್ರವಾಹದ ನೀರು ನುಗ್ಗಿದೆ. ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ಉಪನಗರದ ಕಾಲೋನಿಗಳಲ್ಲಿ 200 ಮನೆಗಳು ಮುಳುಗಡೆಯಾಗಿವೆ. ಜಲಾವೃತಗೊಂಡಿರುವ ಕಾಲೋನಿಗಳಿಗೆ ಶಾಸಕರು ಭೇಟಿ ನೀಡದೇ ತೆರಳಿದ್ದಾರೆ ಎಂದು ಇಲ್ಲಿನ ಸಂತ್ರಸ್ತರು ದೂರಿದ್ದಾರೆ.
ಹಳ್ಳದ ನೀರಿಗೆ ಕೊಚ್ಚಿ ಹೋದ ಕುರಿಗಳು: ತೆಲಂಗಾಣ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಹಳ್ಳ ದಾಟುವ ಭರದಲ್ಲಿ ಪ್ರವಾಹದ ಏರಿಳಿತ ತಡೆದುಕೊಳ್ಳಲಾಗದೇ ಕುರಿಗಳು ಕೊಚ್ಚಿ ಹೋಗಿವೆ. ಭಾರಿ ಮಳೆಗೆ ಕೆರೆಗಳು ಒಡೆದು ಹೋಗುತ್ತಿವೆ. ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿವೆ.
ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ತಾಲೂಕಿನ ಭವಾನಿಪೇಟ್ ಮತ್ತು ಪೋತಾರಂ ಗ್ರಾಮಗಳ ನಡುವಿನ ಹಳ್ಳವನ್ನು ದಾಟುವಾಗ ಕುರಿಗಳು ಕೊಚ್ಚಿಹೋಗಿವೆ. ಕುರುಬರು.. ಗುಂಪು ಗುಂಪಾಗಿ ಹಳ್ಳ ದಾಟುವಾಗ.. ಸ್ವಲ್ಪ ದೂರ ಚೆನ್ನಾಗಿಯೇ ಸಾಗಿತು. ಪ್ರವಾಹ ಮತ್ತಷ್ಟು ಹೆಚ್ಚುತ್ತಿದ್ದಂತೆ ಹಿಂಡಿನಲ್ಲಿದ್ದ ಹಲವು ಕುರಿಗಳು ಹೊಳೆಯಲ್ಲಿ ಕೊಚ್ಚಿ ಹೋಗಿವೆ.
ಪ್ರವಾಹದಲ್ಲಿ ಕೊಚ್ಚಿ ಹೋದ ಕುರಿಗಳ ಪೈಕಿ ಸ್ಥಳೀಯರು ಕೆಲ ಕುರಿಗಳನ್ನು ಮಾತ್ರ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಕುರಿಗಳು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾವೆ. ಕುರಿಗಳು ಹೊಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ನಷ್ಟವಾಗಿದೆ ಎಂದು ಕುರುಬರು ಅಳಲು ತೋಡಿಕೊಂಡರು. ಸರಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಓದಿ: LIVE Video.. ವರುಣನ ಅವಾಂತರ.. ಕ್ಷಣಮಾತ್ರದಲ್ಲೇ ಏಕಾಏಕಿ ಕುಸಿದ ಹೆದ್ದಾರಿ ಪಕ್ಕದ ರೆಸಾರ್ಟ್!