ತಿರುಪತಿ: ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಅವರ ಕುಟುಂಬಸ್ಥರೂ ಬಾರದೆ ಅನಾಥ ಶವಗಳಾಗುತ್ತಿವೆ. ಆದರೆ, ಆಂಧ್ರದ ತಿರುಪತಿಯಲ್ಲಿ ಮುಸ್ಲಿಮರ ಗುಂಪೊಂದು ಸೋಂಕಿತ ಶವಗಳ ಅಂತಿಮ ವಿಧಿವಿಧಾನಗಳನ್ನು ಅವರವರ ಸಂಪ್ರದಾಯದಂತೆಯೇ ನೆರವೇರಿಸುತ್ತಿದೆ.
ಕೋವಿಡ್ -19 ಜಂಟಿ ಕ್ರಿಯಾ ಸಮಿತಿ (ಜೆಎಸಿ) ಬ್ಯಾನರ್ ಅಡಿಯಲ್ಲಿ ಸಕ್ರಿಯವಾಗಿರುವ ತಬ್ಲಿಘಿ ಜಮಾ ಅತ್‌ಗೆ ಸೇರಿದ ಸ್ವಯಂಸೇವಕರು ಕಳೆದೊಂದು ವರ್ಷದಿಂದ 450 ಕ್ಕೂ ಹೆಚ್ಚು ಶವಸಂಸ್ಕಾರಗಳನ್ನು ಮಾಡಿದ್ದಾರೆ. ಕಳೆದ ವರ್ಷ ವೈರಸ್ನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮುಸ್ಲಿಂ ಬಾಂಧವರು ಜೆಎಸಿಯನ್ನು ರಚಿಸಿದರು.
ಮೃತರ ಧಾರ್ಮಿಕ ನಂಬಿಕೆಗಳಿಗನುಗುಣವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಸಂಸ್ಕಾರ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಎಸಿ ಅಧ್ಯಕ್ಷ ಇಮಾಮ್ ಸಾಹೇಬ್, ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಸಲುವಾಗಿ ಮೃತರ ಅಂತಿಮ ಸಂಸ್ಕಾರವನ್ನು ನಾವೇ ಮಾಡುತ್ತಿದ್ದೇವೆ. ಇದಕ್ಕೆ ಕೆಲ ದಾನಿಗಳು ಆರ್ಥಿಕ ಸಹಾಯ ಮಾಡಿದ್ದಾರೆ ಎಂದರು.
ಸರ್ವಶಕ್ತನಾದ ಅಲ್ಲಾಹನು ನಮಗೆ ಈ ಅವಕಾಶವನ್ನು ನೀಡಿದ್ದಾನೆ ಎಂದು ನಾವು ನಂಬುತ್ತೇವೆ. ರಕ್ತಸಂಬಂಧಿಗಳು ಮತ್ತು ಸ್ನೇಹಿತರಿಲ್ಲದೇ ಮೃತರ ಅಂತ್ಯಸಂಸ್ಕಾರವನ್ನು ನಾವೇ ಮಾಡುತ್ತಿದ್ದೇವೆ. ಆ ಮೂಲಕ ಜನರನ್ನು ರಕ್ಷಿಸುತ್ತಿರುವ ಹೆಮ್ಮೆ ನಮಗಿದೆ. ಇದು ರೋಗದ ವಿರುದ್ಧ ಹೋರಾಡುವ ಸಮಯ, ಜನರ ಜೀವನದೊಂದಿಗೆ ಅಲ್ಲ ಎಂದು ಇಮಾಮ್ ಅಭಿಪ್ರಾಯ ಪಟ್ಟಿದ್ದಾರೆ.
ಇಮಾಮ್ ಅವರ ಮಾನವೀಯ ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಲಭಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ಪಾತ್ರವಾಗಿದೆ. ಇವರ ಮಾನವೀಯ ಕಾರ್ಯ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಆಶಯ.