ಹೈದರಾಬಾದ್: ಅಸ್ಸೋಂನಲ್ಲಿ ಮಾರ್ಚ್ 27 ರಂದು ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ 76.89 ಮತದಾನವಾಗಿದ್ದು, ಏಪ್ರಿಲ್ 1 ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿದೆ.
ಎರಡನೇ ಹಂತದಲ್ಲಿ 39 ಕ್ಷೇತ್ರಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕೋವಿಡ್ -19 ಪ್ರೋಟೋಕಾಲ್ ಜಾರಿ ಮಾಡಲಾಗಿದೆ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಟ್ಟು 73,44,631 ಜನ ಮತ ಚಲಾಯಿಸಲಿದ್ದು, ಅದರಲ್ಲಿ 37,34,537 ಮಂದಿ ಪುರುಷರು, 36,09,959 ಮಹಿಳೆಯರು ಮತ್ತು 135 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

13 ಜಿಲ್ಲೆಗಳ 39 ಕ್ಷೇತ್ರಗಳಲ್ಲಿ ಒಟ್ಟು 10,592 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಜೊತೆಗೆ ಕೋವಿಡ್ ಮಾರ್ಗಸೂಚಿ ಅನುಸರಣೆ ಮಾಡುವುದು ಕಡ್ಡಾಯವಾಗಿದೆ. ಅಸ್ಸೋಂನಲ್ಲಿ ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಲ್ಲೂ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಗುರುವಾರ ನಡೆಯಲಿರುವ ಮತದಾನವು ಒಟ್ಟು 345 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿಸದ್ದು, ಏಪ್ರಿಲ್ 6 ರಂದು 3ನೇ ಹಂತದ ಚುನಾವಣೆ ನಿಗದಿಯಾಗಿದೆ. ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ.





