ಪಲ್ನಾಡು (ಆಂಧ್ರ ಪ್ರದೇಶ): ತಂದೆಯೋರ್ವ ತನ್ನ ಮಗನನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ತಲೆಯನ್ನು ಬೇರ್ಪಡಿಸಿರುವ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ. ಇಷ್ಟೇ ಅಲ್ಲ, ನಂತರದಲ್ಲಿ ತಲೆಯನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಆರೋಪಿ ತಂದೆ ಗ್ರಾಮದಲ್ಲಿ ಸುತ್ತಾಡಿದ್ದಾನೆ ಎಂದು ಹೇಳಲಾಗಿದೆ.
ಇಲ್ಲಿನ ಸತ್ತೇನಪಲ್ಲಿ ಕ್ಷೇತ್ರದ ನಕರಿಕಲ್ಲು ಮಂಡಲ ಗುಂಡ್ಲಪಲ್ಲಿ ಎಂಬ ಗ್ರಾಮದಲ್ಲಿ ಗುರುವಾರ ರಾತ್ರಿ ಈ ದುಷ್ಕೃತ್ಯ ಜರುಗಿದೆ. ವಡ್ಡೇರ ಕಾಲೋನಿಯ ನಿವಾಸಿ ವೀರಯ್ಯ ಎಂಬಾತನೇ ಮಗನನ್ನು ಕೊಂದ ಆರೋಪಿಯಾಗಿದ್ದು, 25 ವರ್ಷದ ಕಿಶೋರ್ ಅಪ್ಪನಿಂದ ಹತ್ಯೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ನಕರಿಕಲ್ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಕಿಶೋರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ.
ಹಣ ನೀಡದ ಕಾರಣಕ್ಕೆ ಕೊಲೆ: ಹತ್ಯೆಯಾದ ಕಿಶೋರ್‌ನ ತಾಯಿ ಅಲಿವೇಲು ದುಡಿಯಲೆಂದು ಕೊಲ್ಲಿ ರಾಷ್ಟ್ರವಾದ ಕುವೈತ್‌ಗೆ ಹೋಗಿದ್ದಾರೆ. ತಾನು ದುಡಿದು ಹಣ ಸಂಪಾದಿಸಿ ಅಲ್ಲಿಂದ ಮಗನಿಗೆ ಕಳುಹಿಸುತ್ತಿದ್ದರು. ಮದ್ಯ ವ್ಯಸನಿಯಾಗಿರುವ ಕಿಶೋರ್ ತಂದೆ ವೀರಯ್ಯ ಮದ್ಯಕ್ಕಾಗಿ ಹಣ ಕೊಡುವಂತೆ ಮಗನಿಗೆ ಕೇಳಿದ್ದಾನೆ. ಆದರೆ, ಮಗ ಕೊಡದ ಕಾರಣ ಈ ಕೊಲೆ ಮಾಡಿರಬಹದು ಎಂಬ ಶಂಕೆ ವ್ಯಕ್ತವಾಗಿದೆ.
ಸೆಲ್ಫಿ ವಿಡಿಯೋ ಮಾಡಿ ಕಣ್ಣೀರು: ಮತ್ತೊಂಡೆದೆ, ಮಗನ ಸಾವಿನ ಸುದ್ದಿ ತಿಳಿದು ಕುವೈತ್ನಲ್ಲಿ ನೆಲೆಸಿರುವ ಅಲಿವೇಲು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ, ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ಕಣ್ಣೀರು ಸುರಿಸಿದ್ದಾರೆ. ಮಗನ ಮುಖವನ್ನು ಕೊನೆಯ ಬಾರಿ ನೋಡಬೇಕು ಎಂದುಕೊಂಡಿದ್ದರೂ ಮಾಲೀಕರು ಒಪ್ಪುತ್ತಿಲ್ಲ ಎಂದು ತಾಯಿ ಅಲಿವೇಲು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಕುವೈತ್‌ನಿಂದ ಭಾರತಕ್ಕೆ ಬರಲು ನೆರವು ನೀಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ.
ಸಾಲ ತೀರಿಸಲು ಕುವೈತ್‌ಗೆ ಹೋಗಿರುವ ತಾಯಿ: ಮಗ ಮತ್ತು ಮಗಳ ಮದುವೆ ನಿಟ್ಟಿನಲ್ಲಿ ಐದು ಲಕ್ಷ ರೂಪಾಯಿ ಸಾಲವಾಗಿದೆ. ಆದರೆ, ತಂದೆ ಮತ್ತು ಮಗ ಇಬ್ಬರೂ ಮದ್ಯ ವ್ಯಸನಿಗಳು ಆಗಿದ್ದಾರೆ. ಆದ್ದರಿಂದ ಸಾಲ ತೀರಿಸುವ ಹೊಣೆ ಹೊತ್ತುಕೊಂಡು ಅಲಿವೇಲು ಎರಡು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಕುವೈತ್‌ಗೆ ಕೆಲಸಕ್ಕೆ ಹೋಗಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉದ್ಯಮಿ ಹತ್ಯೆಗೈದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ದುಷ್ಕರ್ಮಿಗಳು
ಕೇರಳದಲ್ಲಿ ಹೋಟೆಲ್ ಉದ್ಯಮಿ ಕೊಲೆ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಶವವನ್ನು ಎರಡು ಟ್ರಾಲಿ ಬ್ಯಾಗ್ಗಳಲ್ಲಿ ತುಂಬಿ ಎಸೆದಿರುವ ಘಟನೆ ನಡೆದಿದೆ. ಸಿದ್ದಿಕ್ ಕೊಲೆಯಾದ ಉದ್ಯಮಿ ಎಂದು ಗುರುತಿಸಲಾಗಿದ್ದು, ಶವ ತುಂಬಿದ್ದ ಎರಡು ಬ್ಯಾಗ್ಗಳು ಇಲ್ಲಿನ ಘಾಟ್ ಪ್ರದೇಶದಲ್ಲಿ ಪತ್ತೆಯಾಗಿವೆ. ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಶಿಬಿಲಿ ಮತ್ತು ಫರ್ಹಾನಾ ಎಂಬ ಇಬ್ಬರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಇಬ್ಬರ ಆರೋಪಿಗಳು ಜಾರ್ಖಂಡ್ಗೆ ಪಲಾಯನವಾಗಲು ರೈಲು ಹತ್ತುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಇವರನ್ನು ಚೆನ್ನೈನಿಂದ ಕೇರಳಕ್ಕೆ ಕರೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: IPL ಬೆಟ್ಟಿಂಗ್ ದಂಧೆಗೆ ಮಂಡ್ಯದಲ್ಲಿ ಎಳನೀರು ವ್ಯಾಪಾರಿ ಬಲಿ