ಹೈದರಾಬಾದ್: ತೆಲಂಗಾಣದ ನಲ್ಲಗೊಂಡ ಜಿಲ್ಲೆಯ ನಕಿರೇಕಲ್‌ನಲ್ಲಿ ಉಮಾರಾಣಿ ಎಂಬುವರ ಮನೆ ಆವರಣದಲ್ಲಿ ಹಿತ್ತಲು ಇದೆ. ಈ ಹಿತ್ತಲಿಗೆ ಹೋಗಬೇಕಾದರೆ ಹೆಲ್ಮೆಟ್ ಕಡ್ಡಾಯವಾಗಿದೆ. ಹೆಲ್ಮೆಟ್ ಇಲ್ಲದಿದ್ದರೆ ಯಾರೂ ಹಿತ್ತಲಿಗೆ ಹೋಗುವುದಿಲ್ಲ. ಮನೆ ಒಡತಿ ಉಮಾರಾಣಿಯವರು ಬಟ್ಟೆ ಒಗೆಯುವಾಗಲೂ ಸಹ ಹೆಲ್ಮೆಟ್ ಬಳಸುತ್ತಾರೆ. ಅವರ ಮಕ್ಕಳಿಗೆ ಸ್ನಾನ ಮಾಡಿಸುವಾಗಲೂ ಹೆಲ್ಮೆಟ್ ಬೇಕೇ ಬೇಕು. ನಕಿರೇಕಲ್ ನಿವಾಸಿಗಳು ಈ ಮನೆಯವರ ವಿಚಿತ್ರ ನಡೆ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ.
ವಾಹನ ಚಲಾಯಿಸುವಾಗ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಸಂದೇಶವನ್ನು ನೀಡಲು ಇದನ್ನು ಮಾಡುತ್ತಿದ್ದಾರೆ ಎಂದು ಕೆಲವರು ಭಾವಿಸುತ್ತಾರೆ. ಇತರರು ಈ ನಡೆಯನ್ನು ನೋಡಿ ನಗುತ್ತಾರೆ. ನೆರೆಹೊರೆಯವರು ಉಮಾದೇವಿಗೆ ಈ ಬಗ್ಗೆ ಸಾಕಷ್ಟು ಬಾರಿ ಪ್ರಶ್ನೆ ಮಾಡಿದ್ದಾರೆ. ಏನೇ ಆದರೂ ಅವರು ಮಾತ್ರ ಹೆಲ್ಮೆಟ್ ಹಾಕಿಕೊಂಡೇ ಹಿತ್ತಲಿಗೆ ಹೋಗುತ್ತಾರೆ.
ಉಮಾರಾಣಿ ಅವರ ಹಿತ್ತಲಿನಲ್ಲಿ ಒಂದು ಬಾಳೆ ಗಿಡ ಇದೆ. ಕೆಲ ದಿನಗಳಿಂದ ಅದರಲ್ಲೊಂದು ಕ್ವಿಲ್ ಪಕ್ಷಿ ಗೂಡು ಕಟ್ಟಿ ಮೊಟ್ಟೆಗಳನ್ನು ಇಟ್ಟಿದೆ. ಬಾಳೆ ಗಿಡ ದಿನೇ ದಿನೇ ಬೆಳೆಯುತ್ತಿರಬೇಕಾದರೆ ಹಕ್ಕಿಯ ಗೂಡು ಕೆಳಗೆ ಬೀಳುವ ಮಟ್ಟಕ್ಕೆ ಬಂದಿದೆ. ಆಗ ಉಮಾರಾಣಿ ಗೂಡನ್ನು ಚೆನ್ನಾಗಿ ಇಡಬೇಕೆಂದು ತನ್ನ ಪತಿಗೆ ಹೇಳಿದ್ದಾರೆ. ಅದರಂತೆ ಗೂಡು ಸರಿಪಡಿಸಲು ಅವರ ಮುಂದಾದಾಗ ಪಕ್ಷಿ ಇವರ ಮೇಲೆ ದಾಳಿ ಮಾಡಿದೆ. ಗೂಡನ್ನು ಕೀಳುತ್ತಿರಬೇಕು ಎಂದು ಭಾವಿಸಿದ ಪಕ್ಷಿ ಅವರು ಸ್ಥಳದಿಂದ ತೆರಳುವವರೆಗೆ ಅವರನ್ನೇ ಹಿಂಬಾಲಿಸಿದೆ. ಅದಿನಿಂದ ಯಾರೂ ಕೂಡ ಹಿತ್ತಲಿಗೆ ಹೋಗುತ್ತಿಲ್ಲ. ಹೋದರೂ ಹೆಲ್ಮೆಟ್ ಧರಿಸಿ ಹೋಗುತ್ತಾರೆ.
ಅನೇಕರು ಆ ಗೂಡನ್ನು ತೆಗೆಯಲು ಇವರಿಗೆ ಸಲಹೆ ನೀಡಿದ್ದಾರೆ. ಉಮಾರಾಣಿ ಕ್ವಿಲ್ ಪಕ್ಷಿಯ ಗೂಡನ್ನು ಉಳಿಸುವ ಸಲುವಾಗಿ ತಮ್ಮಿಂದ ಪಕ್ಷಿಗೆ ತೊಂದರೆ ಆಗಬಾರದೆಂದು ಇಂತಹ ಹರಸಾಹಸ ಮಾಡುತ್ತಿದ್ದಾರೆ. ಇಡೀ ಕುಟುಂಬ ತಮ್ಮ ಮಕ್ಕಳಂತೆ ಆ ಪಕ್ಷಿಯ ಗೂಡನ್ನು ಕಾಪಾಡಿಕೊಂಡು ಬಂದಿದ್ದು, ಇದರಿಂದ ಸಾಕಷ್ಟು ಖುಷಿ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ.