ಜೋರ್ಹತ್ (ಅಸ್ಸೋಂ): ಅಸ್ಸೋಂನ ಜೋರ್ಹತ್ ಜಿಲ್ಲೆಯ ಸ್ಮಶಾನವು ಕೋಮು ಸೌಹಾರ್ದತೆಗೆ ಉದಾಹರಣೆಯಾಗಿದೆ. ಈ ಶವಾಗಾರದ ವಿಶಿಷ್ಟತೆ ಎಂದರೆ, ಇಲ್ಲಿ ಹಿಂದೂ- ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಒಂದೇ ಕಡೆ ಶವಸಂಸ್ಕಾರ ಮಾಡುತ್ತಾರೆ. ಇದು ಹಲವಾರು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ.
ಜೋರ್ಹತ್ ಜಿಲ್ಲೆಯ ಟೈಟಾಬಾರ್ ಉಪ ವಿಭಾಗದ ಅಡಿ ಇರುವ ಗೋರಾಜನ್‌ನಲ್ಲಿರುವ ಈ ಸ್ಮಶಾನ ಕೋಮು ಸೌಹಾರ್ದತೆಗೆ ಒಂದು ಉದಾಹರಣೆಯಾಗಿದೆ. ಗೋರಾಜನ್‌ನಲ್ಲಿ ಒಂದೇ ಕಡೆ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ತಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಅನುಸಾರವಾಗಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕಳೆದ ಹಲವು ದಶಕಗಳಿಂದ ಈ ಪದ್ಧತಿ ಜಾರಿಯಲ್ಲಿರುವುದು ವಿಶೇಷ. ಜೋರ್ಹತ್ ಪಟ್ಟಣದಿಂದ ಪೂರ್ವಕ್ಕೆ 44 ಕಿ.ಮೀ ದೂರದಲ್ಲಿರುವ ಬೊರ್ಹೋಲಾದಲ್ಲಿನ ಗೋರಜನ್‌ನಲ್ಲಿರುವ ಶವಾಗಾರ ಕಳೆದ 90 ವರ್ಷಗಳಿಂದ ಈ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಈ ಮೂರು ಧರ್ಮಗಳಿಗೆ ಸೇರಿದ ಜನರು ತಮ್ಮ ಇಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ಮಾಡುವ ಮೂಲಕ ತೀರಿಹೋದ ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರವನ್ನು ಇಲ್ಲಿ ಮಾಡುತ್ತಾರೆ. ಯಾವುದೇ ಧರ್ಮದ ವ್ಯಕ್ತಿಯೇ ಸಾವನ್ನಪ್ಪಿದರೂ ಅವರ ಅಂತ್ಯಸಂಸ್ಕಾರದಲ್ಲಿ ಮೂರೂ ಧರ್ಮಗಳ ಜನ ಭಾಗಿಯಾಗುತ್ತಾರೆ.
ಸಾಮಾನ್ಯವಾಗಿ ಎಲ್ಲ ಧರ್ಮಗಳಿಗೆ ಎಲ್ಲೆಡೆ ಪ್ರತ್ಯೇಕ ಸ್ಮಶಾನಗಳಿವೆ. ಆದರೆ, ಗೋರಾಜನ್‌ನಲ್ಲಿರುವ ಈ ಶವಾಗಾರ ಮಾತ್ರ ವಿಶೇಷವಾಗಿದೆ. ಇದು ವರೆಗೆ ಗೋರಾಜನ್‌ನಲ್ಲಿ ಧಾರ್ಮಿಕ ಘರ್ಷಣೆ ಅಥವಾ ದ್ವೇಷದ ಯಾವುದೇ ಘಟನೆಗಳು ನಡೆದಿಲ್ಲ. 1933 ರಲ್ಲಿ ತಮ್ಮ ಪೂರ್ವಜರು ಪ್ರಾರಂಭಿಸಿದ ಈ ಸಾಮರಸ್ಯದ ಮಾರ್ಗವನ್ನು ಎತ್ತಿಹಿಡಿಯುವಲ್ಲಿ ಗೋರಾಜನ್ ಜನರು ಯಶಸ್ವಿಯಾಗಿದ್ದಾರೆ.