ಮಲಪ್ಪುರಂ(ಕೇರಳ) : ಆರ್ಥಿಕ ತೊಂದರೆ, ಇನ್ನಿತರ ಸಮಸ್ಯೆಗಳಿಂದಾಗಿ ಶಿಕ್ಷಣದಿಂದ ವಂಚಿತವಾದ್ರೂ ಕೂಡ ಬೆರಳೆಣಿಕೆಯಷ್ಟು ಜನರು ತಾವು ಕಂಡಿರುವ ಕನಸು ನನಸು ಮಾಡಿಕೊಳ್ತಾರೆ. ಕೇರಳದ ಯುವಕನೋರ್ವ ಅದೇ ಸಾಲಿಗೆ ಸೇರಿದ್ದು, 10ನೇ ತರಗತಿ ಅರ್ಧಕ್ಕೆ ಬಿಟ್ಟು ಕೂಲಿ ಕೆಲಸ ಮಾಡ್ತಿದ್ದ ಯುವಕ ಇದೀಗ ವಿಮಾನ ತಯಾರಿಕೆಯಲ್ಲಿ ಪ್ರವೀಣ ಎಂದರೆ ಎಲ್ಲರೂ ನಂಬಲೇಬೇಕು.
ಕೇರಳದ ಮಲಪ್ಪುರಂ ಜಿಲ್ಲೆಯ ಚೆಮ್ಮಾಡ್ನ ಜುನೈದ್ 10ನೇ ತರಗತಿ ಅರ್ಧಕ್ಕೆ ಬಿಟ್ಟು ಕೂಲಿ ಕಾರ್ಮಿಕನಾಗಿದ್ದ. ಆದರೆ, ಇದೀಗ ಸುಮಾರು 30ಕ್ಕೂ ಅಧಿಕ ರಿಮೋಟ್ ಚಾಲಿತ ವಿಮಾನ ತಯಾರಿಸಿದ್ದಾನೆ. ನೋಡಲು ವಾಣಿಜ್ಯ ವಿಮಾನಗಳಂತೆ ಇದ್ದು, ತಾನು ಇರುವ ಸ್ಥಳದಿಂದಲೇ ಇವುಗಳ ನಿಯಂತ್ರಣ ಮಾಡ್ತಾನೆ.
ಯೂಟ್ಯೂಬ್ ನೋಡಿ ವಿಮಾನ ತಯಾರಿಕೆ : ಈ ವಿಮಾನ ಸಿದ್ಧಪಡಿಸಲು ಜುನೈದ್ ಯಾವುದೇ ರೀತಿಯ ತರಬೇತಿ ಪಡೆದುಕೊಂಡಿಲ್ಲ. ಬದಲಾಗಿ ಯೂಟ್ಯೂಬ್ ನೋಡಿ ಇವುಗಳನ್ನ ಸಿದ್ಧಪಡಿಸಿದ್ದಾನೆ. ಆರಂಭದಲ್ಲಿ ಅನೇಕ ರೀತಿಯ ತೊಂದರೆ ಅನುಭವಿಸಿರುವ ಜುನೈದ್ ಅದನ್ನ ಮೆಟ್ಟಿ ನಿಂತು ಯಶಸ್ಸು ಕಂಡಿದ್ದಾರೆ.
ಈ ವಿಮಾನ ನಿರ್ಮಿಸಲು ಥರ್ಮಾಕೋಲ್, ಸನ್ ಪ್ಯಾಕೆಟ್ ಶೀಟ್, ಸಣ್ಣ ಮೋಟಾರ್ಗಳ ಬಳಕೆ ಮಾಡಲಾಗಿದ್ದು, ಈ ವಿಮಾನಗಳು 500 ಮೀಟರ್ಕ್ಕಿಂತಲೂ ದೂರ ಹಾರಬಲ್ಲವು. ಇದೀಗ ಓರ್ವ ವ್ಯಕ್ತಿಯನ್ನ ಹೊತ್ತೊಯ್ಯುವ ವಿಮಾನ ನಿರ್ಮಿಸುವ ಗುರಿ ಹೊಂದಿರುವ ಜುನೈದ್ ಅದರಲ್ಲಿ ಮಗ್ನರಾಗಿದ್ದಾರೆ.