ಹೈದರಾಬಾದ್ (ತೆಲಂಗಾಣ): ಇಂದಿನ ಕಾಲದ ಮಕ್ಕಳು ತುಂಬಾ ಆ್ಯಕ್ಟಿವ್. ಅದು ಎಷ್ಟರ ಮಟ್ಟಿಗೆ ತಂತ್ರಜ್ಞಾನ ಬಳಕೆಯಲ್ಲಿ ಹಿರಿಯಗಿಂತ ಒಂದು ಹಜ್ಜೆ ಮುಂದೆಯೇ ಇರುತ್ತಾರೆ. ಅದರಲ್ಲೂ ಮೊಬೈಲ್ನಲ್ಲಿ ಎಷ್ಟೋ ವಿಷಯಗಳು ದೊಡ್ಡವರಿಗಿಂತ ಮಕ್ಕಳಿಗೇ ಹೆಚ್ಚು ಗೊತ್ತಿರುತ್ತದೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣ ಇದೆ. ಮೊಬೈಲ್ನಲ್ಲಿ ಗೇಮ್ ಆಡುವೆ ಎಂದು ಅಜ್ಜನ ಮೊಬೈಲ್ ಪಡೆಯುತ್ತಿದ್ದ ಬಾಲಕನೊಬ್ಬ ಬ್ಯಾಂಕ್ ಖಾತೆಯಲ್ಲಿರುವ 36 ಲಕ್ಷ ರೂ. ಹಣವನ್ನು ಸ್ವಾಹಾ ಮಾಡಿದ್ದಾನೆ.!
ಹೌದು, ಹೈದರಾಬಾದ್ನ ಅಂಬರ್ಪೇಟ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಷ್ಟೊಂದು ಹಣವನ್ನು ಕಳೆದುಕೊಂಡಿದ್ದು ಓರ್ವ ನಿವೃತ್ತ ಪೊಲೀಸ್ ಎಂಬುದೇ ಮತ್ತೊಂದು ಅಚ್ಚರಿ. ಅಜ್ಜನ ಮೊಬೈಲ್ನಲ್ಲಿ ಫ್ರೀಫೈರ್ ಗೇಮ್ ಆ್ಯಪ್ ಡೌನ್ಲೋಡ್ ಮಾಡಿದ ಮೊಮ್ಮಗ 10 ಸಾವಿರದಿಂದ ಲಕ್ಷಗಳವವರೆಗೂ ಗೇಮ್ ಆಡಿ, ಅಜ್ಜನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಖಾಲಿ ಮಾಡಿದ್ದಾನೆ.
ಪ್ರೀತಿಯಿಂದ ಮೊಬೈಲ್ ಕೊಟ್ಟಿದ್ದ ತಾತ: ನಿವೃತ್ತ ಪೊಲೀಸ್ ಆಗಿರುವ ಅಜ್ಜ ಮೊಮ್ಮಗನ ಮೇಲಿನ ಪ್ರೀತಿಯಿಂದ ಆತನಿಗೆ ಮೊಬೈಲ್ ಕೊಡುತ್ತಿದ್ದ. ಮೊಮ್ಮಗನಿಗೆ ಗೇಮ್ ಆಡುವ ಇಚ್ಛೆ ಇದ್ದಿದ್ದರಿಂದ ಯಾವುದೇ ಗೇಮ್ ಆ್ಯಪ್ ಡೌನ್ಲೋಡ್ ಮಾಡಿದರೂ ಅಜ್ಜ ಏನೂ ಹೇಳುತ್ತಿರಲಿಲ್ಲ. ಹಾಗೆ ಒಂದು ದಿನ ಫ್ರೀಫೈರ್ ಗೇಮ್ ಆ್ಯಪ್ನ್ನು ಮೊಮ್ಮಗ ಡೌನ್ಲೋಡ್ ಮಾಡಿಕೊಂಡಿದ್ದ. ಇತ್ತ, ಅಜ್ಜ ಇದೇ ಮೊಬೈಲ್ನಲ್ಲಿ ಡಿಜಿಟಲ್ ಪೇಮೆಂಟ್, ನೆಟ್ ಬ್ಯಾಂಕಿಂಗ್ ಸಹ ಬಳಕೆ ಮಾಡುತ್ತಿದ್ದ.
ಇದರಿಂದ ಗೇಮ್ ಆಡುತ್ತಿರಬೇಕಾದರೆ ಪೇಮೆಂಟ್ ಎಂದು ಬಂದಾಗ ನೇರವಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ. ಮೊದಲಿಗೆ 10 ಸಾವಿರ ರೂ. ಪಾವತಿಯಾಗಿದ್ದು, ಇದರಿಂದ 60 ಬಾರಿ ಮೊಮ್ಮಗ ಆಟವಾಗಿದ್ದಾನೆ. ಮುಂದೆ ಬೇರೆ - ಬೇರೆ ಹಂತಗಳಿಗೆ ಗೇಮ್ ತಲುಪಿದಾಗ ಮೊಬೈಲ್ನಲ್ಲಿ ನೆಟ್ ಬ್ಯಾಂಕಿಂಗ್ ಲಿಂಕ್ ಇರುವುದರಿಂದ ಹಣ ತಾನೇ ಕಡಿತವಾಗುತ್ತಲೇ ಹೋಗಿದೆ. ಹೀಗೆ 50 ಸಾವಿರ ರೂ., 1,25 ಲಕ್ಷ ರೂ., 1.45 ಲಕ್ಷ ರೂ., 1.60 ಲಕ್ಷ ರೂ., 1.95 ಲಕ್ಷ ರೂ. ಹಾಗೂ 2 ಲಕ್ಷ ರೂ.ವರೆಗೂ ಹಣ ಕಡಿತವಾಗಿ ಒಟ್ಟಾರೆ 44 ಲಕ್ಷ ರೂ. ಸ್ವಾಹ ಆಗಿದೆ.
ಬ್ಯಾಂಕ್ ಖಾತೆಯಲ್ಲಿ ಹಣವೇ ಖಾಲಿ: ಈ ನಡುವೆ ಹಣ ವಿತ್ಡ್ರಾ ಮಾಡಲು ಅಜ್ಜ ಬ್ಯಾಂಕ್ಗೆ ಹೋಗಿದ್ದಾರೆ. ಆಗ ನಿಮ್ಮ ಖಾತೆಯಲ್ಲಿ ಹಣವೇ ಇಲ್ಲ ಎಂದು ಬ್ಯಾಂಕ್ನವರು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಅಜ್ಜ, ಖಾತೆಯ ವಿವರಗಳನ್ನು ಪಡೆದಿದ್ದಾರೆ. ಆಗ ಫ್ರೀಫೈರ್ ಗೇಮ್ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ. ಹೀಗಾಗಿ ಅಜ್ಜ ಮತ್ತು ಕುಟುಂಬಸ್ಥರು ಸದ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: UPI ಪಾವತಿ ವೇಳೆ ಎಚ್ಚರ: ನಿಮ್ಮ ಖಾತೆಗೆ ಕನ್ನ ಹಾಕುವ ಸೈಬರ್ ಕಳ್ಳರಿದ್ದಾರೆ!