ಪುಣೆ: ಶ್ರಾವಣ ಆರಂಭವಾದ ಬಳಿಕ ಮದ್ಯ, ಮಾಂಸ ತಿನ್ನಲಾಗಲ್ಲ ಎಂಬ ಕಾರಣಕ್ಕಾಗಿ ನಡೆದ ಭರ್ಜರಿ ಪಾರ್ಟಿಯಲ್ಲಿ, ವ್ಯಸನಿಯಾಗಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬನನ್ನು 9 ಮಂದಿ ಸೇರಿ ಚಾಕು ಇರಿದು ಕೊಲೆ ಮಾಡಲಾಗಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಖಂಡು ಅಲಿಯಾಸ್ ದೀಪಕ್ ಗಾಯಕ್ವಾಡ್ ಕೊಲೆಯಾದ ಯುವಕ. ಲಖನ್ ಲಗಾಸ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶ್ರಾವಣ ಆರಂಭಕ್ಕೂ ಮೊದಲು ಎರಡು ಗುಂಪುಗಳು ವಾಕಾಡ್ ಪ್ರದೇಶದ ಮುತಾ ನದಿಯ ಬಳಿ ಮದ್ಯದ ಪಾರ್ಟಿ ಆಯೋಜಿಸಿದ್ದರು.
ಈ ವೇಳೆ ಯುವಕನೊಬ್ಬ ತನ್ನ ಜೊತೆಗಿದ್ದ ಇನ್ನೊಬ್ಬನಿಗೆ ಸಿಗರೇಟ್ ಮತ್ತು ಮದ್ಯ ತರುವಂತೆ ಹೇಳಿದ್ದಾನೆ. ಇನ್ನೊಂದು ಗುಂಪಿನಲ್ಲಿದ್ದ ದೀಪಕ್ ಗಾಯಕ್ವಾಡ್ ಮನುಷ್ಯ ಹೆಚ್ಚು ವ್ಯಸನಿಯಾಗಬಾರದು. ಎಲ್ಲವೂ ಮಿತವಾಗಿರಲಿ ಎಂದು ಸಲಹೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಒಂದು ಗುಂಪಿನ ಯುವಕರು ದೀಪಕ್ ಮೇಲೆ ಹಲ್ಲೆ ಮಾಡಿದ್ದಾರೆ.
ಅಲ್ಲದೇ, ಹರಿತವಾದ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ದೀಪಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೀಗ ಪ್ರಕರಣದಲ್ಲಿ ಅಪ್ರಾಪ್ತ ಸೇರಿದಂತೆ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓದಿ: ಬೆಂಗಳೂರು: ಗಂಡು ಮಗುವಿನ ತಂದೆಗಾಗಿ ಠಾಣೆ ಮೆಟ್ಟಿಲೇರಿದ ಮಹಿಳೆ!