ನವದೆಹಲಿ: ದೇಶದಲ್ಲಿ ಆಮ್ಲಜನಕದ ಕೊರತೆಯ ವರದಿಗಳ ಮಧ್ಯೆ ದಿನಕ್ಕೆ ಒಟ್ಟು 7,500 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದುವರೆಗೆ 6,600 ಮೆಟ್ರಿಕ್ ಟನ್ಗಳಷ್ಟು ವೈದ್ಯಕೀಯ ಬಳಕೆಗಾಗಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರಬರಾಜು ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪಾಲ್, ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಔಷಧವಾಗಿರುವುದರಿಂದ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಆಮ್ಲಜನಕದ ಬಳಕೆಯ ಕುರಿತು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳಿಗೆ ಮನವಿ ಮಾಡಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ನಾವು ದಿನಕ್ಕೆ 7,500 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುತ್ತಿದ್ದೇವೆ. ಆ ಪೈಕಿ 6,600 ಮೆಟ್ರಿಕ್ ಟನ್ಗಳನ್ನು ವೈದ್ಯಕೀಯ ಉದ್ದೇಶಗಳಿಗಾಗಿ ರಾಜ್ಯಗಳಿಗೆ ಹಂಚಲಾಗುತ್ತಿದೆ. ಪ್ರಸ್ತುತ, ನಾವು ಕೆಲ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿರುತ್ತೇವೆ. ಇದರಿಂದ ವೈದ್ಯಕೀಯ ಬಳಕೆಗೆ ಹೆಚ್ಚು ಆಮ್ಲಜನಕ ಲಭ್ಯವಾಗಲಿದೆ ಎಂದಿದ್ದಾರೆ.
ಓದಿ :ಹರಿಯಾಣದ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ 1710 ಡೋಸ್ ಮಂಗಮಾಯ
ಆಮ್ಲಜನಕ ಸರಬರಾಜಿಗೆ ಸಂಬಂಧಪಟ್ಟಂತೆ 24x7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಅಲ್ಲಿ ರಾಜ್ಯ ಸರ್ಕಾರಗಳು ತಮ್ಮ ಟ್ರಕ್ ಎಲ್ಲಾದರು ಸಿಲುಕಿಕೊಂಡಿದ್ದರೆ ಅಥವಾ ಚಲನೆಗೆ ಅಡ್ಡಿಯಾದರೆ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಪರಿಹರಿಸಿಕೊಳ್ಳಬಹುದು. ಇಷ್ಟು ದೊಡ್ಡ ಸವಾಲುಗಳು, ಸಾಂಕ್ರಾಮಿಕ ಸವಾಲು, ಹಲವು ಪಾಲುದಾರರು ಇರುವಾಗ ಆತಂಕ, ಗೊಂದಲ ಉಂಟಾಗುವುದು ಸಹಜ. ಈ ಸಮಸ್ಯೆಗಳನ್ನು ಪರಿಸಹರಿಸಲು ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಭೂಷಣ್ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ದಾಖಲಾದ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಿಂದಾಗಿ ಕೆಲವು ರಾಜ್ಯಗಳಲ್ಲಿ ಆಮ್ಲಜನಕದ ಬೇಡಿಕೆ ಹಠಾತ್ತನೆ ಏರಿಕೆಯಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಎಂಟು ರಾಜ್ಯಗಳಿಗೆ ಆಮ್ಲಜನಕದ ಪ್ರಮಾಣವನ್ನು (ಮೆಟ್ರಿಕ್ ಟನ್‌ಗಳಲ್ಲಿ) ಹೆಚ್ಚಿಸಿದೆ ಎಂದು ಆರೋಗ್ಯ ಆಡಳಿತ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದ ಕೋಟಾವನ್ನು 1,646ರಿಂದ 1,661 ಮೆಟ್ರಿಕ್ ಟನ್, ಮಧ್ಯಪ್ರದೇಶ 445ರಿಂದ 543 ಮೆಟ್ರಿಕ್ ಟನ್, ಹರಿಯಾಣ 156ರಿಂದ 162 ಮೆಟ್ರಿಕ್ ಟನ್, ಯುಪಿಯಲ್ಲಿ 751ರಿಂದ 753 ಮೆಟ್ರಿಕ್ ಟನ್, ಪಂಜಾಬ್ನಲ್ಲಿ 126ರಿಂದ 136 ಮೆಟ್ರಿಕ್ ಟನ್, ಆಂಧ್ರ ಪ್ರದೇಶ 360ರಿಂದ 440 ಮೆಟ್ರಿಕ್ ಟನ್, ಉತ್ತರಾಖಂಡ್ 83ರಿಂದ 103 ಮೆಟ್ರಿಕ್ ಟನ್ ಮತ್ತು ದೆಹಲಿಯಲ್ಲಿ 378ರಿಂದ 480 ಮೆಟ್ರಿಕ್ ಟನ್ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.