ಭುವನೇಶ್ವರ: ಜವಾದ್ ಚಂಡಮಾರುತವು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಹಾಗಾಗಿ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, 75ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನ ರದ್ದುಗೊಳಿಸಿದೆ.
ಇವುಗಳಲ್ಲಿ ಹೆಚ್ಚಾಗಿ ವಿಶಾಖಪಟ್ಟಣಂ (ಆಂಧ್ರಪ್ರದೇಶ), ಹೌರಾ (ಪಶ್ಚಿಮ ಬಂಗಾಳ) ಮತ್ತು ಪುರಿ (ಒಡಿಶಾ) ದಿಂದ ಹೊರಡುವ ರೈಲುಗಳು ಸೇರಿವೆ. ಡಿಸೆಂಬರ್ 4 ರಂದು ಹೊರಡಬೇಕಿದ್ದ ಸುಮಾರು 36 ರೈಲುಗಳನ್ನು ರದ್ದುಗೊಳಿಸಿದೆ. ಇದಲ್ಲದೇ, ಮುನ್ನೆಚ್ಚರಿಕೆ ಕ್ರಮವಾಗಿ ಡಿಸೆಂಬರ್ 5 ರಂದು ಹೊರಡಬೇಕಿದ್ದ 38 ಮತ್ತು ಡಿಸೆಂಬರ್ 6 ರಂದು ಹೊರಡುವ ಒಂದು ರೈಲನ್ನು ರದ್ದುಗೊಳಿಸಲಾಗಿದೆ.
ಡಿಸೆಂಬರ್ 3 ರಂದು ನ್ಯೂ ಟಿನ್ಸುಕಿಯಾದಿಂದ ಹೊರಡುವ ನ್ಯೂ ಟಿನ್ಸುಕಿಯಾ - ಬೆಂಗಳೂರು ಎಕ್ಸ್‌ಪ್ರೆಸ್ (22502) ಭುವನೇಶ್ವರ ಮತ್ತು ವಿಶಾಖಪಟ್ಟಣಂ ಮಾರ್ಗದ ಬದಲಿಗೆ ಖರಗ್‌ಪುರ - ಜಾರ್ಸುಗುಡ-ಬಲ್ಲಹರ್ಸಾ ಮಾರ್ಗದಲ್ಲಿ ಚಲಿಸಲಿದೆ ಎಂದು ಇಲಾಖೆ ತಿಳಿಸಿದೆ.
"ಜವಾದ್ ಚಂಡಮಾರುತದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗವು ಸನ್ನದ್ಧವಾಗಿದೆ. ನಾವು ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. SDRF, NDRF ಮತ್ತು ಇತರ ಏಜೆನ್ಸಿಗಳು ಸೇರಿ ನಮ್ಮ ಸಿಬ್ಬಂದಿ ಜಾಗರೂಕರಾಗಿದ್ದು, ಸಂಪೂರ್ಣ ಸಿದ್ಧತೆಯಲ್ಲಿದ್ದಾರೆ." ಎಂದು ಈಸ್ಟ್ ಕೋಸ್ಟ್ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ಸತ್ಪತಿ ತಿಳಿಸಿದ್ದಾರೆ.
ಇದನ್ನೂ ಓದಿ : Jawad Cyclone ಭೀತಿ : ಆಂಧ್ರದಲ್ಲಿ 54 ಸಾವಿರ ಜನರ ಸ್ಥಳಾಂತರ