ನವದೆಹಲಿ: ಕಳೆದ ವರ್ಷ ಅನೇಕ ತಿಂಗಳುಗಳ ಕಾಲ ಆರ್ಭಟಿಸಿದ ಕೋವಿಡ್ ಮೊದಲನೇ ಅಲೆಯಲ್ಲಿ ಭಾರತದಾದ್ಯಂತ 748 ವೈದ್ಯರು ವೈರಸ್ಗೆ ಬಲಿಯಾಗಿದ್ದರು.
ಆದರೆ ಈ ವರ್ಷ ದೇಶದಲ್ಲಿ ಉಲ್ಬಣಿಸಿರುವ ಕೊರೊನಾ ಎರಡನೇ ಅಲೆಯ ಅಲ್ಪಾವಧಿಯಲ್ಲೇ 719 ವೈದ್ಯರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಹಿತಿ ನೀಡಿದೆ.
719 ಮೃತ ವೈದ್ಯರ ಪೈಕಿ ಬಿಹಾರದಲ್ಲೇ 111 ಮಂದಿ ವೈದ್ಯರು ಮೃತಪಟ್ಟಿದ್ದು, 109 ವೈದ್ಯರ ಸಾವಿನೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿ ನಂತರದ ಸ್ಥಾನದಲ್ಲಿದೆ. ಇನ್ನು ಕರ್ನಾಟಕದಲ್ಲಿ 9 ವೈದ್ಯರು ಬಲಿಯಾಗಿದ್ದಾರೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವೈದ್ಯರು 2ನೇ ಅಲೆಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದಾರೆ ಎಂಬುದರ ವಿವಿರ ಇಲ್ಲಿದೆ ನೋಡಿ.
ಆಮ್ಲಜನಕ, ಬೆಡ್ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆಯಿಂದ ಎರಡನೇ ಕೊರೊನಾ ಅಲೆಯು ಭಾರತೀಯ ವೈದ್ಯಕೀಯ ವಲಯಕ್ಕೆ ದೊಡ್ಡ ಸವಾಲಾಗಿತ್ತು. ಮೇ ತಿಂಗಳ ಆರಂಭದಲ್ಲಿ ದಿನನಿತ್ಯ 4 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, 4 ಸಾವಿರ ಮಂದಿ ಸೋಂಕಿಗೆ ಬಲಿಯಾಗುತ್ತಿದ್ದರು. ಇಂತಹ ದುಸ್ಥಿತಿಯಲ್ಲೂ ವೈದ್ಯರು ರಜೆ ತೆಗೆದುಕೊಳ್ಳದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು. 2020ರ ಸಾಂಕ್ರಾಮಿಕದ ಆರಂಭದ ದಿನಗಳಿಂದ ಹಿಡಿದು ಇಂದಿಗೂ ತಮ್ಮ ಸೇವೆ ಮುಂದುವರೆಸಿದ್ದಾರೆ.