ಮೋದಿ ಸಮ್ಮುಖದಲ್ಲಿ 7 ಸಾವಿರ ಚರಕ ತಿರುಗಿಸಲು ನಿರ್ಧಾರ: ನಿರ್ಮಾಣವಾಗಲಿದೆ ವಿಶ್ವದಾಖಲೆ! - ಗುಜರಾತ್ ವಿಧಾನಸಭೆ ಚುನಾವಣೆ
ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಎಲ್ಲ ಪಕ್ಷಗಳು ಈಗಾಗಲೇ ಭರದ ಸಿದ್ಧತೆಯಲ್ಲಿ ಭಾಗಿಯಾಗಿವೆ. ಇದೀಗ ಬಿಜೆಪಿ ಕೂಡ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಗಾಂಧಿನಗರ(ಗುಜರಾತ್): ಮೋದಿ ತವರು ರಾಜ್ಯ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ, ಇದೇ ತಿಂಗಳಲ್ಲಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ನ ಅಹಮದಾಬಾದ್ಗೆ ಭೇಟಿ ನೀಡಲಿದ್ದಾರೆ. ಪ್ರವಾಸದ ಭಾಗವಾಗಿ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ. ಈ ಸಂದರ್ಭದಲ್ಲಿ 7 ಸಾವಿರ ಚರಕ ತಿರುಗಿಸುವ ಮೂಲಕ ದಾಖಲೆ ಬರೆಯಲು ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿ ಸಮ್ಮುಖದಲ್ಲಿ ಸಬರಮತಿ ನದಿಯ ಮುಂಭಾಗದಲ್ಲಿ ಸುಮಾರು ಏಳು ಸಾವಿರ ಚರಕ ತಿರುಗಿಸಲು ನಿರ್ಧರಿಸಲಾಗಿದ್ದು, ಅದಕ್ಕೋಸ್ಕರ 7000 ಚರಕ ನೇಯ್ಗೆ ಕುಶಲಕರ್ಮಿಗಳು ಉಪಸ್ಥಿತರಿರುವರು. ಗುಜರಾತ್ ರಾಜ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಕಾರ್ಯಕ್ರಮಕ್ಕೆ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕುಶಲಕರ್ಮಿಗಳಿಗೆ ಒಂದು ದಿನದ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಖಾದಿಗಳತ್ತ ಹೆಚ್ಚಿನ ಒಲವು ತೋರುತ್ತಿದ್ದು, ಮತ್ತಷ್ಟು ಪುಷ್ಠಿ ನೀಡುವ ಉದ್ದೇಶದಿಂದ ಖಾದಿ ಗ್ರಾಮ ಉದ್ಯೋಗ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದ್ರೆ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ: ಕೇಜ್ರಿವಾಲ್ ಆಫರ್
ನಿನ್ನೆಯಷ್ಟೇ ಗುಜರಾತ್ನಲ್ಲಿ ಮಾತನಾಡಿದ್ದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆಯನ್ನೂ ಈ ಹಿಂದೆ ನೀಡಿದ್ದಾರೆ.