ಜಲಂಧರ್: ಜಲಂಧರ್ ಜಿಲ್ಲೆಯು ಕ್ರೀಡಾ ನಗರಿಯೆಂದೇ ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ. ಇದು ಕ್ರೀಡಾ ಸಾಮಗ್ರಿಗಳನ್ನು ತಯಾರಿಸುವ ಅತಿ ದೊಡ್ಡ ಕೇಂದ್ರಸ್ಥಾನವಾಗಿದೆ. ಇಷ್ಟು ಮಾತ್ರವಲ್ಲ.. ಇಲ್ಲಿನ ಕ್ರೀಡಾಪಟುಗಳು ಹಲವಾರು ವಿಭಿನ್ನ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿ ಹೆಸರು ಮಾಡಿದ್ದು ಮಾತ್ರವಲ್ಲದೇ, ದೇಶದ ಹೆಸರನ್ನು ವಿಶ್ವ ಕ್ರೀಡಾ ಭೂಪಟದಲ್ಲಿ ಮಿನುಗುವಂತೆ ಮಾಡಿದ ಹಲವಾರು ಕ್ರೀಡಾಪಟುಗಳು ಇಲ್ಲಿದ್ದಾರೆ. ಇಲ್ಲಿನ ಸನ್ಸಾಪುರ್ ಹಾಗೂ ಮಿಥಾಪುರ್ಗಳಿಂದ 18 ಜನ ಹಾಕಿ ಆಟಗಾರರು ಒಲಿಂಪಿಕ್ಸ್ ಹಾಕಿ ಪಂದ್ಯಗಳಲ್ಲಿ ಆಡಿದ್ದಾರೆ. ಇನ್ನು ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿದ ಹರ್ಭಜನ್ ಸಿಂಗ್ ಭಜ್ಜಿ ಕೂಡ ಇಲ್ಲಿಯವರೇ ಆಗಿದ್ದಾರೆ.
ದೇಶದ ಪರವಾಗಿ ಆಡಿ ನೂರಾರು ಮೆಡಲುಗಳನ್ನು ಗೆದ್ದಿರುವ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಅಭೂತಪೂರ್ವ ಸಾಧನೆಗೈದ ಕ್ರೀಡಾಪಟುಗಳು ಇಲ್ಲಿರುವುದು ಮತ್ತೊಂದು ವಿಶೇಷವಾಗಿದೆ. ಜಲಂಧರ್ನ ದಾವೋಬಾ ಚೌಕ್ ಬಳಿ ವಾಸವಾಗಿರುವ ಓಂ ಪ್ರಕಾಶ್ ಭಾಟಿಯಾ ಎಂಬ ಕ್ರೀಡಾ ಕುಟುಂಬದ ಬಗ್ಗೆ ನೀವು ತಿಳಿಯಲೇಬೇಕು.. ಅಷ್ಟು ಇಂಟರೆಸ್ಟಿಂಗ್ ಆಗಿದೆ ಅವರ ಸ್ಟೋರಿ..!
ಪ್ರಕಾಶ ಭಾಟಿಯಾ ಹಾಗೂ ಸಾಧನಾ ಭಾಟಿಯಾ ದಂಪತಿ ಇಬ್ಬರೂ ಬೇರೆ ಬೇರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದರು. ಇವರು ತಮ್ಮ ಮೂವರು ಮಕ್ಕಳಾದ ಮೃಗೆಂದರ್ ಭಾಟಿಯಾ, ರಿಗ್ವೆಂದರ್ ಭಾಟಿಯಾ ಹಾಗೂ ಮ್ರಿಧು ಭಾಟಿಯಾ ಇವರನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸಿ ಅವರೂ ಸಹ ಶಿಕ್ಷಕರಾಗುವಂತೆ ಮಾಡಿದರು. ಆದರೆ ಈ ಮಕ್ಕಳು ಕೇವಲ ಶಿಕ್ಷಕರಾಗದೇ ಅತ್ಯುತ್ತಮ ಕ್ರೀಡಾಪಟುಗಳೂ ಆಗುವಂತೆ ಪಾಲಕರು ನೋಡಿಕೊಂಡರು. ಇಷ್ಟು ಮಾತ್ರವಲ್ಲದೆ ಭಾಟಿಯಾ ದಂಪತಿಗಳ ಮೊಮ್ಮಗಳಾದ ಪಾವನಿ ಭಾಟಿಯಾ ಕೂಡ ಕ್ರೀಡೆಯಲ್ಲಿ ಹೆಸರು ಮಾಡುತ್ತಿದ್ದಾಳೆ.
ಓದಿ: ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್ ಇರುವ 26 ಚಕ್ರದ ವಿಶ್ವದ ಅತಿ ಉದ್ದದ ಕಾರಿನಲ್ಲಿ ಕೂರಬಹುದು 75 ಜನರು!
ಮೃಗೇಂದರ್ ಭಾಟಿಯಾ ಮತ್ತು ರಿಗ್ವೆಂದರ್ ಭಾಟಿಯಾ ಗೆದ್ದಿದ್ದು 400 ಪದಕ: ಕುಟುಂಬದ ಇಬ್ಬರು ಗಂಡು ಮಕ್ಕಳ ಬಗ್ಗೆ ನೋಡುವುದಾದರೆ ಇವರಿಬ್ಬರೇ ಸೇರಿ ಈವರೆಗೆ 400 ಕ್ರೀಡಾ ಮೆಡಲುಗಳನ್ನು ಗೆದ್ದಿದ್ದಾರೆ. ಸ್ವಿಮ್ಮಿಂಗ್ನಲ್ಲಿ ಇಷ್ಟೊಂದು ಪದಕಗಳನ್ನು ಗೆದ್ದಿದ್ದೇ ಒಂದು ದಾಖಲೆಯಾಗಿದೆ. ಸಹೋದರರಲ್ಲಿ ಹಿರಿಯನಾದ ಮೃಗೇಂದರ್ ಭಾಟಿಯಾ ಸರ್ಕಾರಿ ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರಾಗಿದ್ದು, ಈವರೆಗೆ ಸ್ವಿಮ್ಮಿಂಗ್ನಲ್ಲಿ 100 ಪದಕಗಳನ್ನು ಗೆದ್ದಿದ್ದಾರೆ.
ಇನ್ನು ಕಿರಿಯ ಸಹೋದರ ರಿಗ್ವೆಂದರ್ ಭಾಟಿಯಾ 300 ಮೆಡಲುಗಳನ್ನು ಗೆದ್ದಿದ್ದಾರೆ. ಇದರಲ್ಲಿ ನಾಲ್ಕು ರಾಷ್ಟ್ರಮಟ್ಟದ ಗೋಲ್ಡ್ ಮೆಡಲುಗಳೂ ಸೇರಿವೆ. ಸ್ವಿಮ್ಮಿಂಗ್ನಲ್ಲಿ ಇಂಥ ಅಭೂತಪೂರ್ವ ಸಾಧನೆ ಮಾಡಿದ್ದಕ್ಕಾಗಿ ಪಂಜಾಬ್ ಸರ್ಕಾರ ಇವರನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೆ ಈಜು ಕಲಿಸಲು ಸ್ವಿಮ್ಮಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಮ್ರಿಧುಮಯ್ ಭಾಟಿಯಾ ಕೂಡ ಚಾಂಪಿಯನ್: ಕುಟುಂಬದಲ್ಲಿ ಮೃಗೇಂದರ್ ಹಾಗೂ ರಿಗ್ವೆಂದರ್ ಮಾತ್ರವಲ್ಲದೆ, ಸಹೋದರಿ ಮ್ರಿಧುಮಯ್ ಭಾಟಿಯಾ ಕೂಡ ಸ್ವಿಮ್ಮಿಂಗ್ ಚಾಂಪಿಯನ್ ಆಗಿದ್ದಾರೆ. ಇವರು ಈವರೆಗೆ 150 ಸ್ವಿಮ್ಮಿಂಗ್ ಮೆಡಲುಗಳನ್ನು ಗೆದ್ದು ಜಲಂಧರ್ಗೆ ಹೆಸರು ತಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಹಿಂದಿ ಟೀಚರ್ ಆಗಿರುವ ಮ್ರಿಧುಮಯ್ ಭಾಟಿಯಾ ದೇಶದ ಹೆಮ್ಮೆಯ ಪುತ್ರಿಯಾಗಿದ್ದಾರೆ.