ಪೋಖ್ರಾನ್ (ರಾಜಸ್ಥಾನ): ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಭೂ ಹರಾಜು ಕುರಿತ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ರೈತರೊಬ್ಬರ ಫೋಟೋ ಬಳಕೆ ಮಾಡಿದ್ದು, ಈ ಬಗ್ಗೆ ಖುದ್ದು ರೈತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ನಾನು ಯಾವುದೇ ಸಾಲ ಪಡೆದಿಲ್ಲ. ನನ್ನ ಜಮೀನನ್ನೂ ಹರಾಜು ಹಾಕಿಲ್ಲ. ನನ್ನ ಅನುಮತಿಯಿಲ್ಲದೆ ಛಾಯಾಚಿತ್ರ ತೆಗೆಯಲಾಗಿದೆ. ನನ್ನ ಮಾನಹಾನಿ ಮಾಡಲಾಗಿದೆ'' ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ, ಸರ್ಕಾರದ ಕೆಲ ನೀತಿಗಳ ವಿರುದ್ಧ 'ರಾಜಸ್ಥಾನ ಸಹಿಸುವುದಿಲ್ಲ' ಎಂಬ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಕೆಲ ದಿನಗಳ ಹಿಂದೆ ರೈತರಿಗೆ ಸಂಬಂಧಿಸಿದ ಪೋಸ್ಟರ್ ಹಾಕಲಾಗಿದೆ. ''19,000 ರೈತರ ಜಮೀನು ಹರಾಜು ಹಾಕುವುದನ್ನು ರಾಜಸ್ಥಾನ ಸಹಿಸುವುದಿಲ್ಲ'' ಎಂಬ ಈ ಪೋಸ್ಟರ್‌ನಲ್ಲಿ ಜೈಸಲ್ಮೇರ್ ಜಿಲ್ಲೆಯ ರೈತ, 70 ವರ್ಷದ ಮಧುರಾಮ್ ಜೈಪಾಲ್ ಎಂಬವರ ಭಾವಚಿತ್ರವಿದೆ. ಎಲ್ಲೆಡೆ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದೀಗ ಮಧುರಾಮ್ ತನ್ನ ಫೋಟೋ ಬಳಕೆ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.
ರಾಮದೇವ್ರಾ ಗ್ರಾಮದ ಮಧುರಾಮ್, ''ನಾನು 200 ಬಿಘಾ ಭೂಮಿಯ ಮಾಲೀಕ. ನನ್ನ ಜಮೀನನ್ನು ಹರಾಜು ಹಾಕಿಲ್ಲ ಅಥವಾ ಜಮೀನಿನ ಮೇಲೆ ಯಾವುದೇ ಸಾಲವನ್ನೂ ಮಾಡಿಲ್ಲ. ರಾಜ್ಯದ ರೈತರ ಮಾನಹಾನಿ ಮಾಡುವ ಉದ್ದೇಶದಿಂದ ಬಿಜೆಪಿಯವರು ಪೋಸ್ಟರ್‌ನಲ್ಲಿ ನೀಡಿರುವ ಹೇಳಿಕೆಗಳು ಸಂಪೂರ್ಣ ತಪ್ಪುದಾರಿಗೆಳೆಯುವ ಮತ್ತು ಸುಳ್ಳಿನಿಂದ ಕೂಡಿವೆ'' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, "ಕೆಲ ದಿನಗಳ ಹಿಂದೆ ಜೈಪುರಕ್ಕೆ ಭೇಟಿ ನೀಡಿದ್ದ ನಮ್ಮ ಗ್ರಾಮದ ಯುವಕನೊಬ್ಬನ ಮೂಲಕ ಈ ಪೋಸ್ಟರ್ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ನಂತರದಲ್ಲಿ ಜೈಪುರದಾದ್ಯಂತ ಅನೇಕ ಸ್ಥಳಗಳಲ್ಲಿ ನನ್ನ ಫೋಟೋ ಹೊಂದಿರುವ ಪೋಸ್ಟರ್‌ಗಳನ್ನು ನೋಡುವುದಾಗಿ ಇತರರು ಕೂಡ ತಿಳಿಸಿದರು. ಅಲ್ಲದೇ, ಪೋಸ್ಟರ್‌ನ ಫೋಟೋ ಕ್ಲಿಕ್ ಮಾಡಿ ನಮ್ಮ ಗ್ರಾಮದ ವಾಟ್ಸ್ಆ್ಯಪ್ ಗ್ರೂಪ್ನಲ್ಲೂ ಹಂಚಿಕೊಂಡಿದ್ದಾರೆ. ಈ ಗ್ರೂಪ್ನಲ್ಲಿ ನನ್ನ ಮಗ ಕೂಡ ಇದ್ದು, ಇದನ್ನು ಆತ ಗಮನಿಸಿದ್ದಾನೆ'' ಎಂದು ವಿವರಿಸಿದರು.
''ಪೋಸ್ಟರ್‌ನಲ್ಲಿ ಜಮೀನು ಹರಾಜಿನ ವಿಚಾರವಾಗಿ ಉಲ್ಲೇಖಿಸಿದ ಬಗ್ಗೆ ನನ್ನ ಮಗ ಹೇಳಿದಾಗ ನನಗೆ ಏನೂ ಅರ್ಥವಾಗಲಿಲ್ಲ. ನನ್ನ ಜಮೀನನ್ನು ಇದುವರೆಗೆ ಹರಾಜು ಮಾಡಿಲ್ಲ. ನಾನು ಯಾವುದೇ ಸಾಲ ಮಾಡಿಲ್ಲ. ನನ್ನ ಫೋಟೋವನ್ನು ನನ್ನ ಅನುಮತಿಯಿಲ್ಲದೆ ತೆಗೆಯಲಾಗಿದೆ. ಈ ಪೋಸ್ಟರ್‌ನಿಂದ ನನ್ನ ಫೋಟೋವನ್ನು ತಕ್ಷಣವೇ ತೆಗೆಯಬೇಕೆಂದು ನಾನು ಒತ್ತಾಯಿಸುತ್ತೇನೆ'' ಎಂದು ರೈತ ಮಧುರಾಮ್ ತಿಳಿಸಿದರು.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಪಡೆದ ಯಶೋಧರ ರಾಜೇ ಸಿಂಧಿಯಾ: ಮಧ್ಯಪ್ರದೇಶ ಬಿಜೆಪಿ ಮೇಲಾಗುವ ಪರಿಣಾಮವೇನು?