ಹೈದರಾಬಾದ್ (ತೆಲಂಗಾಣ ): ವಿಧಾನಸಭಾ ಚುನಾವಣೆ ಗ್ಯಾರಂಟಿ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿರುವ ಆರು ಭರವಸೆಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 70 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಕರಡಿಗೆ ಸಿಎಂ ಮೊದಲು ಸಹಿ ಹಾಕುತ್ತಾರೆ. ಬಳಿಕ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತದೆ. ಅರ್ಹತಾ ಮಾನದಂಡಗಳನ್ನು ಅಂತಿಮಗೊಳಿಸಿದ ಬಳಿಕ ಖರ್ಚು ವೆಚ್ಚಗಳ ಕುರಿತಾದ ಮಾಹಿತಿ ತಿಳಿಯಲಿದೆ.
ಇಂದು ತೆಲಂಗಾಣ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ ಬಿ ಸ್ಟೇಡಿಯಂನಲ್ಲಿ ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ಗಣ್ಯರಿಗೆ ಕಾಂಗ್ರೆಸ್ ಆಹ್ವಾನ ನೀಡಿದ್ದು, ಇಂಡಿಯಾ ಮೈತ್ರಿಕೂಟದ ನಾಯಕರಿಗೂ ಕರೆಯೋಲೆ ನೀಡಲಾಗಿದೆ.
6 ಗ್ಯಾರಂಟಿಗಳು:
1. ಮೊದಲನೆಯದು ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 2,500 ರೂ., 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು RTC ಬಸ್‌ಗಳಲ್ಲಿ ಉಚಿತ ಪ್ರಯಾಣ. ಫಲಾನುಭವಿಗಳ ಅರ್ಹತಾ ಮಾನದಂಡಗಳು ಯಾವುವು ಮತ್ತು ಎಷ್ಟು ಮಹಿಳೆಯರಿಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಬೇಕಿದೆ. ಈ ಯೋಜನೆಗೆ ವಾರ್ಷಿಕ ರೂ.18 ಸಾವಿರ ಕೋಟಿ ವೆಚ್ಚವಾಗಲಿದೆ ಎಂಬುದು ಅಧಿಕಾರಿಗಳ ಪ್ರಾಥಮಿಕ ಅಂದಾಜಾಗಿದೆ. ರಾಜ್ಯದಲ್ಲಿ 1.20 ಕೋಟಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಗ್ರಾಹಕರಿದ್ದಾರೆ. ಅರ್ಹತೆ ನಿರ್ಧರಿಸಿದ ನಂತರ ಅವರಲ್ಲಿ ಎಷ್ಟು ಮಂದಿ ರಿಯಾಯಿತಿಗೆ ಅರ್ಹರು ಎಂಬುದು ತಿಳಿಯುತ್ತದೆ.
2. ಎರಡನೇ ಗ್ಯಾರಂಟಿ ರೈತ ಭರೋಸಾ. ರೈತರು ಮತ್ತು ಹಿಡುವಳಿದಾರರಿಗೆ ಎಕರೆಗೆ ರೂ.15 ಸಾವಿರ ಆರ್ಥಿಕ ನೆರವು, ಕೃಷಿ ಕಾರ್ಮಿಕರಿಗೆ ರೂ.12 ಸಾವಿರ, ರೈತ ಭರೋಸಾ ಅಡಿ ಭತ್ತದ ಕೃಷಿಗೆ ಬೋನಸ್ ಆಗಿ ಕ್ವಿಂಟಲ್‌ಗೆ 500 ರೂ. ನೀಡುವುದು. ಹಿಂದಿನ ಸರ್ಕಾರದ ರೈತಬಂಧು ಯೋಜನೆಯಡಿ ಮೊದಲನೇ ಕಂತಿನ ಹಣ ವಿತರಿಸಿದ್ದರಿಂದ ಎರಡನೇ ಕಂತಿನ ಹಣ ನೀಡಬೇಕಿದೆ. ನೀಡಿದ ಭರವಸೆ ಪ್ರಕಾರ ಮೊದಲ ರೂ.5 ಸಾವಿರ ಹೊರತುಪಡಿಸಿ ಇನ್ನೂ ರೂ.10 ಸಾವಿರ ನೀಡಬೇಕು.
3. ಇಂದಿರಮ್ಮ ವಸತಿ ಯೋಜನೆಯಡಿ ವಸತಿ ರಹಿತ ಕುಟುಂಬಗಳಿಗೆ ಮನೆ ನಿವೇಶನ ಹಂಚಿಕೆ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ., ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ.
4. 'ಗೃಹ ಜ್ಯೋತಿ' ನಿಮಿತ್ತ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್.
5. ಯುವ ವಿಕಾಸಂ ಅಡಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂ.ಗಳ ಶಿಕ್ಷಣ ಭರವಸೆ ಕಾರ್ಡ್, ಪ್ರತಿ ಮಂಡಲದಲ್ಲಿ ಅಂತಾರಾಷ್ಟ್ರೀಯ ಶಾಲೆ ಸ್ಥಾಪನೆ.
6. ವೃದ್ಧರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಕಲ್ಲು ಕ್ವಾರಿಗಳು, ಕೈಮಗ್ಗ ಕಾರ್ಮಿಕರು, ಹೆಚ್‌ಐವಿ ಪೀಡಿತರು, ಡಯಾಲಿಸಿಸ್ ರೋಗಿಗಳಿಗೆ 4 ಸಾವಿರ ರೂ. ಮಾಸಿಕ ಪಿಂಚಣಿ ಮತ್ತು ರಾಜೀವ್ ಆರೋಗ್ಯ ವಿಮೆಗೆ 10 ಲಕ್ಷ ರೂ. ನೀಡುವುದು.
ಇದನ್ನೂ ಓದಿ : ಇಂದು ಮಧ್ಯಾಹ್ನ ತೆಲಂಗಾಣ ಸಿಎಂ ಆಗಿ ರೇವಂತ್ ರೆಡ್ಡಿ ಪದಗ್ರಹಣ ; ನಾಳೆ ಮಿಜೋರಾಂ ಸಿಎಂ ಅಧಿಕಾರ ಸ್ವೀಕಾರ