ಅಯೋಧ್ಯೆ(ಉತ್ತರ ಪ್ರದೇಶ) : ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಪವಿತ್ರ ಜನ್ಮಸ್ಥಳವಾದ ಅಯೋಧ್ಯೆಯ ಪವಿತ್ರ ಸರಯೂ ನದಿ ದಡದಲ್ಲಿರುವ ರಾಮ್ ಕಿ ಪೈಡಿ ಸಂಕೀರ್ಣವು ಇಂದು ಭವ್ಯವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಐದನೇ ವರ್ಷಾಚರಣೆಯಲ್ಲಿರುವ ಸಿಎಂ ಯೋಗಿ ಸರ್ಕಾರ ದೀಪೋತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡಲಿದೆ.
ಈ ಬಾರಿ ರಾಮ್ ಕಿ ಪೈಡಿ ದಡದಲ್ಲಿ 7 ಲಕ್ಷದ 50 ಸಾವಿರ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತಿದೆ. ಜಿಲ್ಲೆಯಾದ್ಯಂತ 12 ಲಕ್ಷ ದೀಪಗಳು ಮತ್ತು ಅಯೋಧ್ಯೆಯಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ.
ಸ್ವಯಂ ಸೇವಕರಿಂದ ನಿನ್ನೆ ತಡರಾತ್ರಿಯೇ ರಾಮ್ ಕಿ ಪೈಡಿ ಸಂಕೀರ್ಣದಲ್ಲಿ ಈ ಎಲ್ಲಾ ದೀಪಗಳನ್ನು ಅಳವಡಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ಅತಿಥಿಗಳ ಸಮ್ಮುಖದಲ್ಲಿ ಒಮ್ಮೆಗೆ ಈ ಎಲ್ಲಾ ದೀಪಗಳನ್ನು ಬೆಳಗಿಸಲಾಗುತ್ತದೆ.
ದೀಪಗಳ ಸರಣಿ ನಡುವೆ ರಂಗೋಲಿ ಚಿತ್ತಾರ
ಕಳೆದ 4 ವರ್ಷಗಳಿಂದ ಅಯೋಧ್ಯೆಯ ರಾಮ್ ಕಿ ಪೈಡಿ ಸಂಕೀರ್ಣದಲ್ಲಿ ಆಯೋಜಿಸಲಾಗುತ್ತಿರುವ ದೀಪೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗುತ್ತಿರುವುದು ಗಮನಾರ್ಹವಾಗಿದೆ. ರಾಮನ ಆವರಣದಲ್ಲಿ ಎಲ್ಲಾ ದೀಪಗಳನ್ನು ಬೆಳಗಿಸಿದಾಗ ಇಡೀ ಸಂಕೀರ್ಣವು ದೀಪಗಳಿಂದ ಕಂಗೊಳಿಸಲಿದೆ.
ಈ ವರ್ಷವೂ ಅಂತಹದ್ದೇ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಲೇಸರ್ ಲೈಟ್ ಶೋ ಮೂಲಕ ರಾಮನ ಕಥೆಯನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ, ರಾಮನ ಜೀವನ ಪಾತ್ರವನ್ನು ರಾಮ್ ಕಿ ಪೈಡಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರು ರಂಗೋಲಿ ಮೂಲಕ ಪ್ರದರ್ಶಿಸಿದ್ದಾರೆ. ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ.
ರಂಗೋಲಿ ತಯಾರಿಸುವ ವಿದ್ಯಾರ್ಥಿನಿ ರುಚಿಕಾ ವರ್ಮಾ, ಮೂರೂವರೆ ಗಂಟೆಗಳ ಕಠಿಣ ಪರಿಶ್ರಮದಿಂದ, ರಾಮ ಮತ್ತು ತಾಯಿ ಸೀತೆಯ ಜೊತೆಗೆ ಅದೇ ಚಿತ್ರದಲ್ಲಿ ಅಯೋಧ್ಯೆ ಮತ್ತು ರಾಮ ಮಂದಿರವನ್ನು ಸಹ ಪ್ರದರ್ಶಿಸಿದ್ದೇನೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಮ್ಮ ಸಂಸತವನ್ನು ಹಂಚಿಕೊಂಡಿದ್ದಾರೆ.
12,000 ಸ್ವಯಂಸೇವಕರಿಂದ ದೀಪಗಳ ಅಳವಡಿಕೆ
ರಾಮ್ ಕಿ ಪೈಡಿ ಕ್ಯಾಂಪಸ್‌ನಲ್ಲಿ 7.50 ಲಕ್ಷ ದೀಪಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಡಾ.ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ ಮತ್ತು ಅದರ ಅಂಗಸಂಸ್ಥೆ ಕಾಲೇಜುಗಳ ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ. ನಿನ್ನೆ ಸಂಜೆಯ ವೇಳೆಗೆ ಸಂಕೀರ್ಣದ ಎಲ್ಲಾ ಘಾಟ್‌ಗಳಲ್ಲಿ ದೀಪಗಳನ್ನು ಅಲಂಕರಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜ್ಞಾನಪ್ರಕಾಶ್ ತಿವಾರಿ ಮಾತನಾಡಿ, ಕಳೆದ ವರ್ಷ ಕೇವಲ 18 ಘಾಟ್‌ಗಳಲ್ಲಿ ಮಾತ್ರ ದೀಪಗಳು ಬೆಳಗಿಸಲಾಗಿತ್ತು. ಆಗ 5.30 ಲಕ್ಷ ದೀಪಗಳಿದ್ದವು. ಆದರೆ, ಈ ಬಾರಿ 7.50 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಬಾರಿ ನಮ್ಮ ತಂಡವನ್ನು ವಿಸ್ತರಿಸಿದ್ದೇವೆ.
12,000 ಸ್ವಯಂಸೇವಕರ ತಂಡವು 7.50 ಲಕ್ಷ ದೀಪಗಳನ್ನು ಅಳವಡಿಸಿದೆ. ಇಡೀ ಕ್ಯಾಂಪಸ್‌ನಲ್ಲಿ ಒಟ್ಟು 9 ಲಕ್ಷ ದೀಪಗಳು ಬೆಳಗಲಿದ್ದು, ಅವುಗಳಲ್ಲಿ ಕೆಲವು ದೀಪಗಳು ಸರಯೂ ನದಿ ದಡದಲ್ಲಿಯೂ ಬೆಳಗುತ್ತವೆ. ನಮ್ಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಬಾರಿ ಮತ್ತೊಂದು ವಿಶ್ವ ದಾಖಲೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.