ಲತೇಹಾರ್(ಜಾರ್ಖಂಡ್): ಕರ್ಮ ವಿಸರ್ಜನೆ(ಸಾಂಪ್ರದಾಯಿಕ ಹಬ್ಬ ಆಚರಣೆ) ಸಮಯದಲ್ಲಿ ನೀರಿನಲ್ಲಿ ಮುಳುಗಿ ಏಳು ಅಪ್ರಾಪ್ತ ಹುಡುಗಿಯರು ದುರ್ಮರಣಕ್ಕೀಡಾಗಿರುವ ಘಟನೆ ಜಾರ್ಖಂಡ್ನ ಲತೇಹಾರ್ನಲ್ಲಿ ನಡೆದಿದೆ.
ಜಾರ್ಖಂಡ್ನಲ್ಲಿ ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ನದಿಯಲ್ಲಿ ಕರ್ಮ ವಿಸರ್ಜನೆ ಮಾಡಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ರೇಖಾ ಕುಮಾರಿ(18), ಲಕ್ಷ್ಮಿ ಕುಮಾರಿ (8), ರೀನಾ ಕುಮಾರಿ (11), ಮೀನಾ ಕುಮಾರಿ (8), ಪಿಂಕಿ ಕುಮಾರಿ (15), ಸುಷ್ಮಾ ಕುಮಾರಿ (7), ಸುನಿತಾ ಕುಮಾರಿ (17) ಸಾವಿಗೀಡಾಗಿದ್ದಾರೆ. ಇವರೆಲ್ಲರೂ ಶೇರೆಗಡಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಜಾರ್ಖಂಡ್ನ ಬುಡಕಟ್ಟು ಜನಾಂಗ ಕರ್ಮ ವಿಸರ್ಜನೆ ಎಂಬ ಸಾಂಪ್ರದಾಯಿಕ ವಿಶೇಷ ಹಬ್ಬ ಆಚರಣೆ ಮಾಡುತ್ತೆ. ಸಹೋದರರು ಆರೋಗ್ಯವಾಗಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ಇದರ ಜೊತೆಗೆ ಜಮೀನಿನಲ್ಲಿ ಬೆಳೆದ ಬೆಳಗೆ ಪೂಜೆ ಮಾಡಿ ಅವುಗಳನ್ನ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಈ ವೇಳೆ, ಎಲ್ಲ ಬಾಲಕಿಯರು ನದಿಯಲ್ಲಿ ಮುಳುಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಮದುವೆಗೆ ಅಡ್ಡಿ: ನಾಲ್ವರು ಮಕ್ಕಳ ಹತ್ಯೆ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ
ಈಗಾಗಲೇ ಎಲ್ಲ ಬಾಲಕಿಯರ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಎನ್ನಲಾಗಿದ್ದು, ಇದರಿಂದ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಪ್ರಧಾನಿ, ರಾಷ್ಟ್ರಪತಿ ಸಂತಾಪ
ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಕೇಳಿ ತೀವ್ರ ನೋವಾಗಿದ್ದು, ಸಾವಿನ ದುಃಖದ ನೋವು ಭರಿಸುವ ಶಕ್ತಿ ದೇವರು ಎಲ್ಲರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.