ಶಿಮ್ಲಾ(ಹಿಮಾಚಲ ಪ್ರದೇಶ): ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ಲಾಹೌಲ್ ಸ್ಪಿತಿ ಜಿಲ್ಲೆಯ ಟೋಜಿಂಗ್ ನಲಾದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಏಳು ಮಂದಿ ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಮಾತನಾಡಿ, ಕುಲ್ಲು ಜಿಲ್ಲೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಚಂಬಾದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಲಾಹೌಲ್-ಸ್ಪಿತಿಯಲ್ಲಿ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಕಾಣೆಯಾಗಿದ್ದಾರೆ.
ಕುಲುವಿನಲ್ಲಿ, ಪೂಣಂ ಎಂಬ 26 ವರ್ಷದ ಮಹಿಳೆ ಮತ್ತು ಆಕೆಯ ನಾಲ್ಕು ವರ್ಷದ ಮಗ ನಿಕುಂಜ್ ಅವರು ಪಾರ್ವತಿ ನದಿಯ ಉಪನದಿಯಾದ ಬ್ರಹ್ಮಗಂಗಾದಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನೊಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಸಹ ಕೊಚ್ಚಿ ಹೋಗಿದ್ದಾರೆ. ಲಾಹೌಲ್‌ನ ಉದಯಪುರದಲ್ಲಿ, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಉಂಟಾದ ಪ್ರವಾಹದಿಂದ ಎರಡು ಟೆಂಟ್‌ಗಳಲ್ಲಿದ್ದ ಕಾರ್ಮಿಕರು ಮತ್ತು ಖಾಸಗಿ ಜೆಸಿಬಿ ಕೊಚ್ಚಿ ಹೋಗಿದ್ದಾರೆ ಎಂದು ಮೊಕ್ತಾ ಹೇಳಿದರು.
ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಕಾರ್ಮಿಕರು ಇನ್ನೂ ಕಾಣೆಯಾಗಿದ್ದಾರೆ. ನಾಪತ್ತೆಯಾದವರನ್ನು ಹುಡುಕಲು ಪೊಲೀಸರು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡಗಳನ್ನು ರವಾನಿಸಲಾಗಿದೆ. ಆದರೆ ಮಂಗಳವಾರ ರಾತ್ರಿ ಶೋಧ ಕಾರ್ಯಾಚರಣೆಗೆ ಭಾರಿ ನೀರಿನ ಹರಿವು ಅಡ್ಡಿಯಾಗಿದೆ ಎಂದು ಹೇಳಿದರು. ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಪುನರಾರಂಭವಾಗಿದೆ.
ಇದನ್ನೂ ಓದಿ: ಭೂಕುಸಿತ: ಮೃತರ ಕುಟುಂಬಸ್ಥರು, ಗಾಯಾಳುಗಳಿಗೆ ಪರಿಹಾರ ಘೋಷಣೆ
ಲಾಹೌಲ್ ಕಣಿವೆಯಲ್ಲಿ ಭಾರಿ ಮಳೆಯಿಂದಾಗಿ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ. ಮನಾಲಿ ಕಾಜಾ ರಸ್ತೆಯಿಂದ ಅವಶೇಷಗಳನ್ನು ತೆಗೆಯುವಲ್ಲಿ ಬಿಆರ್‌ಒ ತಂಡವೂ ತೊಡಗಿದೆ. ಇದಲ್ಲದೆ ಮನಾಲಿ ಲೇಹ್ ರಸ್ತೆಯಲ್ಲೂ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಪರಿಸ್ಥಿತಿ ತಹಬದಿಗೆ ಬರುವ ತನಕ ವಾಹನ ಸಂಚಾರಕ್ಕೆ ಮುಂದಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ನಾಪತ್ತೆಯಾದವರ ಬಗ್ಗೆ ರಕ್ಷಣಾ ತಂಡ ನಿರಂತರವಾಗಿ ಶೋಧ ನಡೆಸುತ್ತಿದೆ ಎಂದು ಎಸ್ಪಿ ಮಾನವ್ ವರ್ಮಾ ಹೇಳಿದ್ದಾರೆ. ಈವರೆಗೆ 8 ಜನರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರರನ್ನು ಸಹ ಶೀಘ್ರದಲ್ಲೇ ಹುಡುಕಲಾಗುವುದು. ಕಣಿವೆಯ ಜನರು ಯಾವುದೇ ಕಾರಣವಿಲ್ಲದೆ ಪ್ರಯಾಣಿಸಬಾರದು ಎಂದು ಲಾಹೌಲ್ ಸ್ಪಿತಿ ಜಿಲ್ಲಾಧಿಕಾರಿ ನೀರಜ್ ಕುಮಾರ್ ಸೂಚಿಸಿದ್ದಾರೆ.