ಚಂಡೀಗಢ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಹುಡುಗಿಯರು ಸ್ನಾನ ಮಾಡುವ ಆಕ್ಷೇಪಾರ್ಹ ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಓರ್ವ ವಿದ್ಯಾರ್ಥಿನಿ ಮತ್ತು ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು. ಬಳಿಕ ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಮೂವರು ಆರೋಪಿಗಳನ್ನು ಭಾರೀ ಭದ್ರತೆಯೊಂದಿಗೆ ಖರಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಎಂಎಂಎಸ್ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳನ್ನು ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಯಿತು.
ಆರೋಪಿಗಳಾದ ಸನ್ನಿ, ರಂಕಜ್ರನ್ನು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ. ವಿಡಿಯೋ ಲೀಕ್ ಮಾಡಿದ್ದಾಳೆ ಎಂಬ ಆರೋಪ ಹೊತ್ತಿರುವ ಯುವತಿಯನ್ನೂ ಪೊಲೀಸರು ಘಟನೆ ನಡೆದ ದಿನವೇ ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧವೂ ಸೆಕ್ಷನ್ 354 ಸಿ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಟನಾಕಾರರಿಗೆ ಕೆನಡಾದಿಂದ ಬೆದರಿಕೆ: ಎಂಎಂಎಸ್ ವಿಡಿಯೋ ಲೀಕ್ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದ್ದು, ಪ್ರತಿಭಟನೆ ಕೈಬಿಡುವಂತೆ ಧಮ್ಕಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಎಂಎಂಎಸ್ ವಿಡಿಯೋ ಸೋರಿಕೆ ವಿರುದ್ಧ ಚಂಡೀಗಢ ವಿಶ್ವವಿದ್ಯಾಲಯದ ಹೊರಗೆ ಹುಡುಗಿಯರು ಭಾರಿ ಪ್ರತಿಭಟನೆ ನಡೆಸಿದ್ದರು. ಇದು ವಿವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಭಾರಿ ಪೊಲೀಸ್ ಪಡೆಯನ್ನು ಕರೆಸಲಾಗಿತ್ತು.
ಈ ಪ್ರತಿಭಟನೆಯನ್ನು ಕೈಬಿಡುವಂತೆ ಸೂಚಿಸಿ ಕೆನಡಾದಿಂದ ಅನಾಮಿಕ ಕರೆಗಳು ಬಂದಿವೆ. ಧರಣಿ ನಡೆಸಿದರೆ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂದು ಕೆಲ ವಿದ್ಯಾರ್ಥಿನಿಯರು ದೂರಿದ್ದಾರೆ.
ಓದಿ: ಚಂಡೀಗಢ ವಿವಿ ವಿಡಿಯೋ ಲೀಕ್ ಪ್ರಕರಣಕ್ಕೆ ಟ್ವಿಸ್ಟ್.. ಆರೋಪಿ ಯುವತಿ ಬಗ್ಗೆ ಪೊಲೀಸರು ಹೇಳಿದ್ದಿಷ್ಟು