ಕೋಲ್ಕತ್ತಾ: ಕೋವಿಡ್ 2ನೇ ಅಲೆಯ ಆರ್ಭಟದ ನಡುವೆಯೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ 6ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ 43 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ಸಂಜೆ 6ರ ನಂತರ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳೊಂದಿಗೆ ಕೋವಿಡ್ ಸೋಂಕಿತರಿಗೆ ಕೊನೆ ಗಳಿಗೆಯಲ್ಲಿ ಮತದಾನ ಮಾಡಲು ಅವಕಾಶ ಒದಗಿಸಲಾಗಿದೆ.
ಇಂದು ಮತದಾನ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲೂ ಆಡಳಿತಾರೂಢ ಪಕ್ಷ ಟಿಎಂಸಿ ಮತ್ತು ಬಿಜೆಪಿಯ ನಡುವೆ ನೇರ ಪೈಪೋಟಿ ಇದೆ. 2016 ಮತ್ತು 2019ರಲ್ಲಿಯೂ ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿಯ ಎಡ ಪಕ್ಷಗಳು ಅಷ್ಟೊಂದು ಪ್ರಾಬಲ್ಯ ಹೊಂದಿಲ್ಲ.
ಇದನ್ನೂ ಓದಿ: ಸುಳ್ಳು ಹೇಳೋರಿಗೂ ಕೋವಿಡ್ ಬರುತ್ತೆ; ರಾಹುಲ್ ಪಾಸಿಟಿವ್ ವರದಿ ಕುರಿತು ಬಿಜೆಪಿ ನಾಯಕ ಎಡವಟ್ಟು
2016ರ ಎಲೆಕ್ಷನ್‌ನಲ್ಲಿ ಟಿಎಂಸಿ 32 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 7 ಹಾಗೂ ಎಡ ಪಕ್ಷಗಳು 4 ಕ್ಷೇತ್ರಗಳನ್ನು ಉಳಿಸಿಕೊಂಡಿದ್ದವು. ಆದರೆ 2019ರ ಲೋಕಸಭೆ ಚುನಾವಣೆ ವೇಳೆಗೆ ಇಲ್ಲಿನ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಬಿಜೆಪಿ 18 ಸೀಟು ಗೆದ್ದು 2ನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ, ಕಾಂಗ್ರೆಸ್, ಎಡಪಕ್ಷಗಳಿಗೆ ಯಾವುದೇ ಸೀಟು ದೊರೆಯಲಿಲ್ಲ.