ಅನಂತಪುರ(ಆಂಧ್ರಪ್ರದೇಶ): ಶಿಕ್ಷಣ ಕಲಿಯಲು, ಸಾಧನೆ ಮಾಡಲು ವಯಸ್ಸಿನ ಅಡ್ಡಿ ಇರಲ್ಲ ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬ ರೀತಿಯಲ್ಲಿ ಇದೀಗ ನಿವೃತ್ತ ಸರ್ಕಾರಿ ನೌಕರನೋರ್ವ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್(GATE) ಟಾಪ್ ರ್ಯಾಂಕ್ನೊಂದಿಗೆ ಪಾಸ್ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವೃತ್ತ ಉದ್ಯೋಗಿ ವಿ. ಸತ್ಯನಾರಾಯಣ ರೆಡ್ಡಿ ಗೇಟ್ ಪರೀಕ್ಷೆಯಲ್ಲಿ ದೇಶಕ್ಕೆ 140ನೇ ರ‍್ಯಾಂಕ್ ಪಡೆದವರು. ಈ ಮೂಲಕ ಸಾಧನೆಗೆ ವಯಸ್ಸು ಅಡ್ಡಿಯಾಗಲ್ಲ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿ. ಸತ್ಯನಾರಾಯಣ ರೆಡ್ಡಿ 2018ರಲ್ಲಿ ನಿವೃತ್ತರಾಗಿದ್ದು, ಇದರ ಬೆನ್ನಲ್ಲೇ ಜೆಎನ್ಟಿಯುನಲ್ಲಿ ಎಂಟೆಕ್ ಮುಗಿಸಿ, ಗೇಟ್ ಪರೀಕ್ಷೆ ಬರೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಫಲಿತಾಂಶ ಬಂದಿದ್ದು, 140ನೇ ಸ್ಥಾನ ಪಡೆದಿದ್ದಾರೆ.
39 ವರ್ಷಗಳ ಕಾಲ ಪಂಚಾಯತ್ ರಾಜ್ ಇಲಾಖೆಯಲ್ಲಿ ಸತ್ಯನಾರಾಯಣ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, 2018ರಲ್ಲಿ ನಿವೃತ್ತಿ ಪಡೆದುಕೊಂಡಿದ್ದರು. 2019ರಲ್ಲಿ ಹೈದರಾಬಾದ್ನಲ್ಲಿರುವ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಟೆಕ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. 2022ರಲ್ಲಿ ಕೋರ್ಸ್ ಮುಕ್ತಾಯವಾಗುತ್ತಿದ್ದಂತೆ ಗೇಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಅದರಲ್ಲಿ ಟಾಪ್ ರ‍್ಯಾಂಕ್ ಪಡೆದು ಪಾಸ್ ಆಗುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. 64 ವರ್ಷ ವಯಸ್ಸಿನ ಇವರಿಗೆ ಇಬ್ಬರು ಪುತ್ರರು ಸೇರಿದಂತೆ ಮೊಮ್ಮಕ್ಕಳು ಇದ್ದಾರೆ.
ಗೇಟ್ ಪರೀಕ್ಷೆ ಪಾಸ್ ಆಗಿರುವ ಇವರು, ಇದೀಗ ಬಾಂಬೆ ಐಐಟಿ ಅಥವಾ ರೂರ್ಕೆಲಾದಲ್ಲಿರುವ ಜಿಐಎಸ್ ರಿಮೋಟ್ ಸೈನ್ಸ್ ಕೋರ್ಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.