ರೋಹತಾಸ್(ಬಿಹಾರ): ಕಳ್ಳರು ಕೋಟ್ಯಂತರ ರೂಪಾಯಿ ಹಣ, ಬ್ಯಾಂಕ್ ದರೋಡೆ ಮಾಡಿದ್ದನ್ನು ನೀವು ಕೇಳಿರಬಹುದು. ಆದರೆ, ಬಿಹಾರದಲ್ಲಿ ನಡೆದ ದರೋಡೆ ಮಾತ್ರ ವಿಚಿತ್ರವಾಗಿದೆ. 50 ವರ್ಷದ ಹಳೆಯ, 60 ಅಡಿ ಉದ್ದದ ಸೇತುವೆಯನ್ನೇ ಖದೀಮರು ಕದ್ದಿದ್ದಾರೆ. ಇಡೀ ಸೇತುವೆಯನ್ನೇ ನೆಲಸಮ ಮಾಡಿ ಅಲ್ಲಿದ್ದ ಕಬ್ಬಿಣವನ್ನು ಕಳವು ಮಾಡಿದ್ದರೂ, ಅಧಿಕಾರಿಗಳಿಗೆ ಮಾತ್ರ ಈ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲವಂತೆ. ಘಟನೆ ಬೆಳಕಿಗೆ ಬಂದ ಬಳಿಕ ಇಡೀ ಗ್ರಾಮಸ್ಥರು ಮತ್ತು ಆಡಳಿತ ವರ್ಗ ಆಶ್ಚರ್ಯಚಕಿತರಾಗಿದ್ದಾರೆ.
ಬಿಹಾರದ ರೋಹತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯವರ್ ಎಂಬಲ್ಲಿ ಈ ಪ್ರಕರಣ ನಡೆದಿದೆ. ಕಳ್ಳರು ತಮ್ಮನ್ನು ನೀರಾವರಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ಸೇತುವೆಯ ಮರು ನಿರ್ಮಾಣ ಮಾಡಬೇಕೆಂದು ಇಡೀ ಸೇತುವೆಯನ್ನೇ ನಿರ್ನಾಮ ಮಾಡಿ ಅದಕ್ಕೆ ಅಳವಡಿಸಲಾಗಿದ್ದ 20 ಟನ್ಗೂ ಹೆಚ್ಚು ಕಬ್ಬಿಣವನ್ನು ದೋಚಿದ್ದಾರೆ.
ಹಗಲಲ್ಲೇ ನಡೆದ ದರೋಡೆ: ಚಿಕ್ಕ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಈ ಸೇತುವೆ ಹಲವು ವರ್ಷಗಳ ಹಿಂದೆಯೇ ಬಳಸದೇ ಅನಾಥವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಸೇತುವೆಯನ್ನು ಕೆಡವಿ ಕಬ್ಬಿಣವನ್ನು ಬೆಳಗ್ಗೆಯೇ ಹಲವು ದಿನಗಳ ಕಾಲ ಸಾಗಣೆ ಮಾಡಿದ್ದಾರೆ. ಕಣ್ಣಮುಂದೆಯೇ ದೊಡ್ಡ ಕಳ್ಳತನ ನಡೆಯುತ್ತಿದ್ದರೂ ಗುರುತಿಸಲಾಗದ ಜನರು ಮೂಕಪ್ರೇಕ್ಷಕರಾಗಿದ್ದರು. ಘಟನಾ ಸ್ಥಳಕ್ಕೆ ಹೋಗಿ ಪ್ರಶ್ನಿಸಿದರೆ ತಮ್ಮನ್ನು ನೀರಾವರಿ ಇಲಾಖೆಯ ಅಧಿಕಾರಗಳು ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದರಂತೆ. ಮಹಾ ದರೋಡೆ ನಡೆಯುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. 60 ಅಡಿ ಉದ್ದದ ಸೇತುವೆಯನ್ನು ಜೆಸಿಬಿ, ಗ್ಯಾಸ್ ಕಟ್ಟರ್ ಮೂಲಕ ಕೆಡವಿದ್ದಾರೆ.
ಸೇತುವೆ ತೆರವಿಗೆ ಅರ್ಜಿ ಬಂದಿತ್ತು: 60 ಅಡಿ ಉದ್ದ, 10 ಅಡಿ ಅಗಲ, 12 ಅಡಿ ಎತ್ತರದ ಸುಮಾರು 50 ವರ್ಷಗಳ ಹಿಂದಿನ ಈ ಸೇತುವೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಾಲಕ್ರಮೇಣ ಈ ಸೇತುವೆ ಹಳೆಯದಾದ ಕಾರಣ ಪರ್ಯಾಯವಾಗಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಇದು ವ್ಯರ್ಥವಾಗಿ ಬಿದ್ದಿತ್ತು. ಈ ಸೇತುವೆಯನ್ನು ತೆರವು ಮಾಡಲು ಜನರು ಕೂಡ ಆಡಳಿತಾಧಿಕಾರಿಗಳಿಗೆ ಅರ್ಜಿ ಬರೆದಿದ್ದರು. ಇದನ್ನರಿತ ದರೋಡೆಕೋರರು ಸೇತುವೆಯನ್ನು ಧ್ವಂಸ ಮಾಡಿ ಕಬ್ಬಿಣವನ್ನು ಕದ್ದೊಯ್ದಿದ್ದಾರೆ.
ಕಳ್ಳತನ ಹೊರಬಿದ್ದಿದ್ದೇಗೆ?: ಸೇತುವೆಯನ್ನೇ ನುಂಗಿ ನೀರು ಕುಡಿದ ಖದೀಮರು ಇನ್ನೇನು ಸೇತುವೆಯ ಎಲ್ಲ ಅವಶೇಷಗಳನ್ನು ಕದ್ದು ಹೋಗುತ್ತಿದ್ದಾಗ ಅಕ್ಕಪಕ್ಕದ ಗ್ರಾಮಸ್ಥರು ಅಧಿಕಾರಿಗಳಿಗೆ ಈ ಸೇತುವೆಯ ನಿರ್ನಾಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಸೇತುವೆ ಒಡೆಯುವ ಬಗ್ಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಸತ್ಯ ಬಯಲಾಗಿದೆ. ಅಧಿಕಾರಿಗಳ ಸೋಗಿನಲ್ಲಿ ಯಾರೋ ಖದೀಮರು ಸೇತುವೆಯನ್ನೇ ಕದ್ದೊಯ್ದಿದ್ದು ಗೊತ್ತಾಗಿದೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಬೆನ್ನು ಬಿದ್ದಿದ್ದಾರೆ.
ಇದನ್ನೂ ಓದಿ: ಈ ಹಳ್ಳಿಯಲ್ಲಿ ಮೊದಲ ಬಾರಿಗೆ ರಿಂಗಣಿಸಿದ ಮೊಬೈಲ್! ಎಲ್ಲಿದೆ ಆ ಊರು?