ಹೈದರಾಬಾದ್: ಮನೈರ್ ನದಿಯಲ್ಲಿ ಈಜಲು ಹೋಗಿದ್ದ ವೇಳೆ 6 ವಿದ್ಯಾರ್ಥಿಗಳು ನೀರುಪಾಲಾದ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಎನ್ಡಿಆರ್ಎಫ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ 5 ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಶೋಧ ಮುಂದುವರೆದಿದೆ.
ಸಿರ್ಸಿಲ್ಲಾ ಜಿಲ್ಲೆಯ ಹೊರವಲಯದಲ್ಲಿರುವ ಮನೈರ್ ನದಿಯಲ್ಲಿ ಇಲ್ಲಿನ ವೆಂಕಂಪೇಟ ಸರ್ಕಾರಿ ಬಾಲಕರ ಶಾಲೆಯ 9 ವಿದ್ಯಾರ್ಥಿಗಳು ಈಜಾಡಲು ತೆರಳಿದ್ದಾರೆ. ಈ ವೇಳೆ, 6 ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದಾರೆ. (6 School Students Drowning in Manair River) ಇದನ್ನು ಕಂಡ ಮೂವರು ಹೆದರಿ ಅಲ್ಲಿಂದ ಓಡಿ ಹೋಗಿದ್ದಾರೆ.
ನೀರಿನಲ್ಲಿ ವಿದ್ಯಾರ್ಥಿಗಳು ಕೊಚ್ಚಿ ಹೋಗುತ್ತಿರುವುದನ್ನು ಕಂಡ ಜನರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಾಚರಣೆ ವಿಳಂಬವಾಗಿತ್ತು.
ಬಳಿಕ ಹೈದರಾಬಾದ್ನಿಂದ ನುರಿತ ಈಜು ಪಟುಗಳು, ಎನ್ಡಿಆರ್ಎಫ್ ತಂಡಗಳನ್ನೂ ಸ್ಥಳಕ್ಕೆ ಕರೆತಂದು ಶೋಧ ನಡೆಸಲಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ಹಗ್ಗಗಳನ್ನು ಬಳಸಿ ಶೋಧ ನಡೆಸಲಾಯಿತು. ನಿರಂತರ ಕಾರ್ಯಾಚರಣೆ ಬಳಿಕ 5 ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿವೆ. ಇನ್ನೊಬ್ಬ ವಿದ್ಯಾರ್ಥಿಯ ಪತ್ತೆಗೆ ಶೋಧ ಮುಂದುವರಿದಿದೆ.
ವೆಂಕಂಪೇಟ ಸರ್ಕಾರಿ ಬಾಲಕರ ಶಾಲೆಯಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿಗಳು ಶಾಲೆ ಬಿಟ್ಟ ಬಳಿಕ ಈಜಾಡಲು ಮನೈರ್ ನದಿಗೆ ತೆರಳಿದ್ದಾರೆ. ನದಿ ನೀರಿನ ಹರಿವು ರಭಸವಾಗಿದ್ದನ್ನು ಅರಿಯದ ವಿದ್ಯಾರ್ಥಿಗಳು ಏಕಾಏಕಿ ನೀರಿಗೆ ಇಳಿದಾಗ ನೋಡುನೋಡುತ್ತಿದ್ದಂತೆ 6 ವಿದ್ಯಾಥಿರ್ಗಳು ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಇನ್ನುಳಿದವರು ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತಾಪ ವ್ಯಕ್ತಪಡಿಸಿರುವ ಸಚಿವ ಕೆಟಿಆರ್ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.