ಅಮೇಥಿ(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಟ್ರಕ್ ಮತ್ತು ಬೊಲೆರೊ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮದುವೆಗೆ ಹೋಗುತ್ತಿದ್ದ ಆರು ಜನ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು.
ಗೌರಿಗಂಜ್ ಪ್ರದೇಶದ ಬಾಬುಗಂಜ್ ಸಗ್ರಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಭಾನುವಾರ ತಡರಾತ್ರಿ ಟ್ರಕ್ ಮತ್ತು ಬೊಲೆರೊ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ ಹತ್ತು ಜನರ ಪೈಕಿ 5 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದು ಮಗು ಕೂಡ ಸೇರಿದೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳಾದ ಮುಖೇಶ್, ಅನುಜ್, ಅನಿಲ್ ಮತ್ತು ಲವಕುಶರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ: ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಕಾರು; ದಂಪತಿ ಸೇರಿ ಮೂವರು ಸಜೀವ ದಹನ
ಭಾನುವಾರ ತಡರಾತ್ರಿ ನನ್ನ ಮಗ ಅನಿಲ್ ತನ್ನ ಅತ್ತೆ ಮತ್ತು ಆಕೆಯ ಕುಟುಂಬಸ್ಥರೊಡನೆ ಬೊಲೆರೊದಲ್ಲಿ ಸಂಬಂಧಿಕರೊಬ್ಬರ ಮದುವೆಯಲ್ಲಿ ಭಾಗಿಯಾಗುವುದಕ್ಕೆ ತೆರಳುತ್ತಿದ್ದನು. ಮಾರ್ಗಮಧ್ಯೆ ಮೌನಿ ಬಾಬಾ ಆಶ್ರಮದ ಬಳಿ ಜೈಸ್ ಕಡೆಯಿಂದ ಬರುತ್ತಿದ್ದ ಟ್ರಕ್ ಚಾಲಕ ಎದುರುಗಡೆಯಿಂದ ಬರುತ್ತಿದ್ದ ಬೊಲೆರೊಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ನನ್ನ ಮಗ ಅನಿಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎಂದು ಚಂದ್ರಿಕಾ ನಿವಾಸಿ ಗಣೇಶಲಾಲ್ ಪೊಲೀಸರಿಗೆ ವಿವರಿಸಿದ್ದಾರೆ.
ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಎಲ್ಲ ಗಾಯಾಳುಗಳನ್ನು ಲಖೌನದ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ. ಮೃತರಲ್ಲಿ ನಾಲ್ವರು ಅಮೇಥಿ ಪ್ರದೇಶದ ಗುಂಗ್ವಾಚ್ ನಿವಾಸಿಗಳು ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.