ದೊಡ್ಡಬಳ್ಳಾಪುರ (ಬೆಂ.ಗ್ರಾ): ಹೂ ಬೆಳೆ ಕಾಪಾಡಿಕೊಳ್ಳಲು ನೀರಿನ ಮೂಲ ಹುಡುಕುವ ಪ್ರಯತ್ನದಲ್ಲಿದ್ದ ರೈತನಿಗೆ ಕೃಷಿ ಹೊಂಡದಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಮಳೆ ನೀರನ್ನು ಸಂಗ್ರಹಿಸಿ ಬೆಳೆ ಕಾಪಾಡಿಕೊಳ್ಳುವ ಉಪಾಯ ಹೊಳೆಯಿತು. ಪರಿಣಾಮ, ಒಂದೂವರೆ ತಿಂಗಳ ಶ್ರಮದಿಂದ 10 ಮೀಟರ್ ಅಳದ ಬೃಹತ್ ಹೊಂಡ ನಿರ್ಮಿಸಿದ್ರು. 1,400 ಅಡಿ ಬೋರ್‌ವೆಲ್‌ಗಳನ್ನು ಕೊರೆದು ಲಕ್ಷಾಂತರ ರೂಪಾಯಿ ವ್ಯರ್ಥ ಮಾಡಿದ್ದ ರೈತನಿಗೆ ಹೊಳೆದ ಹೊಸ ಆಲೋಚನೆ ಇದೀಗ ಮಾದರಿಯಾಗಿದೆ.
ಬೆಳೆ ಉಳಿಸಿಕೊಳ್ಳಲು 12 ಬೋರ್‌ವೆಲ್ ಕೊರೆಯಿಸಿ ನೀರು ಸಿಗದೆ 40 ಲಕ್ಷ ರೂ. ನಷ್ಟ ಅನುಭವಿಸಿದ ರೈತನೋರ್ವ, ಛಲ ಬಿಡಲಿಲ್ಲ. ತನ್ನ ತೋಟದಲ್ಲಿ 6 ಕೋಟಿ ಲೀಟರ್ ಮಳೆ ನೀರು ಸಂಗ್ರಹವಾಗುವ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿದ್ರು. ಈ ಮೂಲಕ ದಾಖಲೆಯನ್ನೇ ಬರೆದು ಇತರ ರೈತರಿಗೆ ಮಾದರಿಯಾದರು.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಹೆಜ್ಜಾಜಿ ಗ್ರಾಮದ ರೈತ ರವಿಕುಮಾರ್, ತಮ್ಮಲ್ಲಿರುವ 8 ಎಕರೆ ವಿಸ್ತೀರ್ಣದ ಪಾಲಿಹೌಸ್ನಲ್ಲಿ ಗುಲಾಬಿ ಬೆಳೆಯುತ್ತಿದ್ದಾರೆ. ಈ ಗುಲಾಬಿ ಹೂಗಳು ದೇಶದ ನಾನಾ ಕಡೆ, ವಿದೇಶಕ್ಕೂ ರಫ್ತಾಗುತ್ತಿದೆ. ಇದರಿಂದ ಲಕ್ಷಾಂತರ ರೂ. ಆದಾಯದ ಜೊತೆಗೆ ಸ್ಥಳೀಯ 150ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ. 20 ಎಕರೆ ಜಮೀನು ಹೊಂದಿರುವ ಇವರು 8 ಎಕರೆ ವಿಸ್ತೀರ್ಣದಲ್ಲಿ ಪಾಲಿಹೌಸ್ ನಿರ್ಮಿಸಿ 12 ವಿಧದ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ.
ಹೂವಿನ ಬೆಳೆಗಾಗಿ ಇವರು 12 ಬೋರ್‌ವೆಲ್ ಕೊರೆಸಿದ್ದಾರೆ. 1,400 ಅಡಿ ಕೊರೆದ್ರೂ ನೀರು ಸಿಗದೆ ಬರೋಬ್ಬರಿ 40 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ಹೂ ಬೆಳೆ ಕಾಪಾಡಿಕೊಳ್ಳಲು ನೀರಿನ ಮೂಲ ಹುಡುಕುವ ಪ್ರಯತ್ನದಲ್ಲಿದ್ದವರಿಗೆ, ಕೃಷಿಹೊಂಡದಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಮಳೆ ನೀರನ್ನು ಸಂಗ್ರಹಿಸಿ ಬೆಳೆ ಕಾಪಾಡಿಕೊಳ್ಳುವ ಉಪಾಯ ತಿಳಿದಿದೆ. ಬಳಿಕ ಒಂದೂವರೆ ತಿಂಗಳ ಶ್ರಮದಿಂದ 10 ಮೀಟರ್ ಆಳದ ಬೃಹತ್ ಹೊಂಡ ನಿರ್ಮಿಸಿದ್ರು. ಇದಕ್ಕಾಗಿ 32 ಲಕ್ಷ ರೂ. ಹಣ ಖರ್ಚು ಮಾಡಿದ್ರು.
ಪಾಲಿಹೌಸ್ ಮೇಲೆ ಬಿದ್ದ ಮಳೆ ನೀರು ಪೈಪ್ಗಳ ಮೂಲಕ ಚರಂಡಿ ಸೇರುತ್ತೆ. ಅಲ್ಲಿಂದ ಕಾಲುವೆಯ ಮೂಲಕ ನೀರು ಹೊಂಡಕ್ಕೆ ಹರಿದು ಬರುತ್ತೆ. ಇದರಲ್ಲಿ 6 ಕೋಟಿ ಲೀಟರ್ ನೀರು ಸಂಗ್ರಹವಾಗುತ್ತೆ. ಒಮ್ಮೆ ಹೊಂಡ ಭರ್ತಿಯಾದರೆ ಒಂದು ವರ್ಷದವರೆಗೂ ಬಳಕೆ ಮಾಡಬಹುದು. ಬೋರ್‌ವೆಲ್ ನೀರು ಹೆಚ್ಚಿನ ಲವಣಾಂಶ ಹೊಂದಿರುವುದರಿಂದ ಬೆಳೆಗಳಿಗೆ ಸೂಕ್ತವಲ್ಲ. ಆದರೆ ಮಳೆನೀರು ಶುದ್ಧವಾಗಿದ್ದು ಹೂ ಬೆಳೆ ಚೆನ್ನಾಗಿ ಬರುತ್ತೆ ಎಂದು ರೈತ ರವಿಕುಮಾರ್ ಹೇಳುತ್ತಾರೆ.