ನವದೆಹಲಿ : ರಿಲಯನ್ಸ್ ಜಿಯೋ ದೇಶಾದ್ಯಂತ ಈಗಾಗಲೇ 277 ನಗರಗಳಲ್ಲಿ ಟ್ರೂ 5ಜಿ ಸೇವೆಯನ್ನು ಪ್ರಾರಂಭಿಸಿದೆ ಮತ್ತು ಈ ವರ್ಷದ ಡಿಸೆಂಬರ್‌ನೊಳಗೆ ದೇಶದ ಪ್ರತಿ ಪಟ್ಟಣ, ತಾಲೂಕು ಮತ್ತು ತಹಸಿಲ್‌ಗಳನ್ನು ಒಳಗೊಂಡಂತೆ ದೇಶಾದ್ಯಂತ ಜಿಯೋ 5ಜಿ ಸೇವೆ ಆರಂಭಿಸಲಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಮತ್ತು ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ವತಿಯಿಂದ ಆಯೋಜಿಸಲಾದ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, ಇದು ವಿಶ್ವದ ಅತ್ಯಂತ ವೇಗವಾದ 5G ರೋಲ್‌ಔಟ್ ಆಗಲಿದೆ ಎಂದು ಹೇಳಿದರು.
ಜಿಯೋ 700 Mhz ಮತ್ತು 3500Mhz ಬ್ಯಾಂಡ್‌ನಲ್ಲಿ 5G ನೆಟ್‌ವರ್ಕ್‌ನ 40,000 ಕ್ಕೂ ಹೆಚ್ಚು ಸೈಟ್‌ಗಳು ಮತ್ತು ಸುಮಾರು 2,50,000 ಸೆಲ್‌ಗಳನ್ನು ನಿಯೋಜಿಸಿದೆ. ಪ್ರತಿ ತಿಂಗಳು ಕಳೆದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ತಾಲೂಕುಗಳಲ್ಲಿ ಜಿಯೋ 5G ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ ಎಂದು ಅಂಬಾನಿ ಹೇಳಿದರು. ಟ್ರೂ 5G ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ವಿಶ್ವದ ಅತಿದೊಡ್ಡ ಸ್ಟ್ಯಾಂಡ್ ಅಲೋನ್ ನೆಟ್‌ವರ್ಕ್ ಆರ್ಕಿಟೆಕ್ಚರ್‌ನೊಂದಿಗೆ ಜಿಯೋ ದೇಶದಲ್ಲಿ 5G ನೆಟ್‌ವರ್ಕ್ ರೋಲ್‌ಔಟ್ ಮಾಡುತ್ತಿದೆ.
ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಮೇಲೆ 5G ಪ್ರಭಾವವು ಅಗಾಧವಾಗಿದೆ. 5G ತಂತ್ರಜ್ಞಾನವು ನೀಡಿದಷ್ಟು ಹಲವಾರು ಬೆಳವಣಿಗೆ ವಲಯಗಳನ್ನು ಇತರ ಯಾವುದೇ ತಂತ್ರಜ್ಞಾನವು ನಮಗೆ ನೀಡಿಲ್ಲ. ಸಮಾಜದ ಸುಧಾರಣೆ ಮತ್ತು 140 ಕೋಟಿ ಭಾರತೀಯರ ಜೀವನೋಪಾಯಕ್ಕಾಗಿ 5G ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ವಿಶಿಷ್ಟ ಸ್ಥಾನವನ್ನು ಹೊಂದಿದೆ ಎಂದು ಅಂಬಾನಿ ತಿಳಿಸಿದರು. 5G ನಮ್ಮ ನಗರಗಳನ್ನು ಸ್ಮಾರ್ಟ್ ಮಾಡುತ್ತದೆ ಅಥವಾ ಸಮಾಜವನ್ನು ಸುರಕ್ಷಿತಗೊಳಿಸುತ್ತದೆ. ಇದು ಉಪಕರಣಗಳನ್ನು ಮತ್ತಷ್ಟು ದೃಢವಾಗಿಸುತ್ತದೆ, ತುರ್ತು ಸೇವೆಗಳಿಗೆ ಹೆಚ್ಚು ಸ್ಪಂದಿಸುತ್ತದೆ ಮತ್ತು ಉದ್ಯಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ಆರೋಗ್ಯ, ಶಿಕ್ಷಣ, ಕೃಷಿ, ಸ್ಮಾರ್ಟ್ ಸಿಟಿಗಳು ಮತ್ತು ಮನರಂಜನೆ ಮತ್ತು ಉತ್ಪಾದಕತೆ ಸೇರಿದಂತೆ ಮೂಲಸೌಕರ್ಯಗಳಂತಹ ಕ್ಷೇತ್ರಗಳಲ್ಲಿ 5G ಅತಿ ಉಪಯುಕ್ತವಾದ ಸಾಧನವಾಗುತ್ತಿದೆ. ಆರೋಗ್ಯ ಕ್ಷೇತ್ರವು 5G ತಂತ್ರಜ್ಞಾನದ ಅತ್ಯಂತ ಮಹತ್ವದ ಫಲಾನುಭವಿಗಳಲ್ಲಿ ಒಂದಾಗಿದೆ. 5G ಆಧರಿತ ರಿಮೋಟ್ ಸಮಾಲೋಚನೆಗಳಿಂದ ರೋಗಿಗಳು ದೈಹಿಕವಾಗಿ ವೈದ್ಯರನ್ನು ಭೇಟಿ ಮಾಡದೆ ಸುಲಭವಾಗಿ ಸಮಾಲೋಚಿಸಬಹುದು. ಇದು ಸಮಯವನ್ನು ಉಳಿಸುತ್ತದೆ, ಸೋಂಕುಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯದ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಂಬಾನಿ ತಿಳಿಸಿದರು.
5G ನೆಟ್‌ವರ್ಕ್‌ಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನೈಜ ಸಮಯದಲ್ಲಿ ವರ್ಚುವಲ್ ರಿಯಾಲಿಟಿ (VR) ಅಥವಾ ಆಗ್ಮೆಂಟೆಡ್ ರಿಯಾಲಿಟಿ (AR) ಅನುಭವಗಳ ಮೂಲಕ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ. ಇದು ಹೆಚ್ಚು ಸಂವಾದಾತ್ಮಕ ಮತ್ತು ಅರ್ಥಪೂರ್ಣ ಕಲಿಕೆಯ ಅನುಭವಗಳಿಗೆ ಅವಕಾಶ ನೀಡುತ್ತದೆ ಎಂದು ಆಕಾಶ್ ಅಂಬಾನಿ ಹೇಳಿದರು.
ಇದನ್ನೂ ಓದಿ: 5G ಗಾಗಿ ಟೆಲಿಕಾಂ ಆಪರೇಟರ್‌ಗಳು ವಾರಕ್ಕೆ ಸರಾಸರಿ 2,500 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ: ಕೇಂದ್ರ ಮಾಹಿತಿ