ಅಲಿಗಢ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವನೆಯಿಂದ ಇದುವರೆಗೆ 55 ಜನರು ಸಾವಿಗೀಡಾಗಿದ್ದು, ಇನ್ನೂ 17 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವವರನ್ನು ಜೆಎನ್ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಚಂದ್ರ ಭೂಷಣ್ ಸಿಂಗ್ ಅವರು ಇದುವರೆಗೆ 25 ಜನರ ಸಾವನ್ನು ಖಚಿತಪಡಿಸಿದ್ದಾರೆ.
ನಕಲಿ ಮದ್ಯ ಸೇವಿಸಿದ ನಂತರ ಹಲವಾರು ಜನರು ಅನಾರೋಗ್ಯಕ್ಕೆ ಒಳಗಾಗಿ ಗುರುವಾರ ರಾತ್ರಿಯಿಂದ ಸರಣಿ ಸಾವುಗಳು ಸಂಭವಿಸಿವೆ. ಅಲಿಗಢದ ಲೋಧಾ, ಖೈರ್, ಜವಾನ್, ಟಪ್ಪಲ್, ಪಿಸಾವಾ ಪ್ರದೇಶಗಳಿಂದ ಈ ಕಂಟ್ರಿ ಸಾರಾಯಿಯನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎನ್ಎಸ್ಎ ಕಾಯ್ದೆಯನ್ನು ಜಾರಿಗೊಳಿಸಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಭೂಷಣ್ ಸಿಂಗ್ ಮಾತನಾಡಿ, ಇದುವರೆಗೆ ನಾಲ್ಕು ಸರ್ಕಾರಿ ಮದ್ಯದಂಗಡಿಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಡಿಎಂ ಆಡಳಿತದಿಂದ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಮಡೆಯುತ್ತಿದ್ದು, ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳಲ್ಲಿ ಸಲ್ಲಿಸಲಿದ್ದಾರೆ.