ಕಾನ್ಪುರ (ಉತ್ತರ ಪ್ರದೇಶ): ಕಳಪೆ ಶೈಕ್ಷಣಿಕ ಸಾಧನೆ, ಅಶಿಸ್ತು ಮತ್ತು ಅಸಭ್ಯತೆ ಆರೋಪ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕಾನ್ಪರ ಐಐಟಿಯಿಂದ 54 ವಿದ್ಯಾರ್ಥಿಗಳನ್ನು ವಜಾಗೊಳಿಸಲಾಗಿದೆ. ಬುಧವಾರ ನಡೆದ ಸೆನೆಟ್ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 54 ಜನ ವಜಾಗೊಂಡ ವಿದ್ಯಾರ್ಥಿಗಳಲ್ಲಿ ಬಿ.ಟೆಕ್, ಎಂ.ಟೆಕ್ ಹಾಗೂ ಪಿ.ಎಚ್ಡಿ ವಿದ್ಯಾರ್ಥಿಗಳೇ ಅಧಿಕವಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಕಳಪೆ ಶೈಕ್ಷಣಿಕ ಸಾಧನೆ ತೋರಿರುವುದರಿಂದಲೇ ಅಮಾನತುಗೊಳಿಸಲಾಗಿದೆ. ಇವರಲ್ಲಿ ಕೆಲವರು ತಮ್ಮ ಸಹಪಾಠಿಗಳೊಂದಿಗೆ ಅಶಿಸ್ತು ಮತ್ತು ಅಸಭ್ಯತೆಯಿಂದ ವರ್ತಿಸಿರುವುದರಲ್ಲೂ ತಪ್ಪು ಕಂಡು ಬಂದಿದೆ. ಆದ್ದರಿಂದ ಐಐಟಿ ನಿಮಯಗಳ ಪ್ರಕಾರ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳಿಗೆ ತಮ್ಮನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಐಐಟಿಯ ನಿರ್ದೇಶಕ ಪ್ರೊ. ಅಭಯ್ ಕರಂಡಿಕರ್ ತಿಳಿಸಿದ್ದಾರೆ. ಅನೇಕ ಬಾರಿ ವಿದ್ಯಾರ್ಥಿಗಳು ಅನಾರೋಗ್ಯ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲ್ಲ. ಅಂತಹ ವಿದ್ಯಾರ್ಥಿಗಳು ಮುಂದೆ ಉತ್ತಮ ಶೈಕ್ಷಣಿಕ ಸಾಧನೆ ತೋರುತ್ತಾರೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಲಿಘಡ್ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್