ಅಗರ್ತಲಾ: ತ್ರಿಪುರಾದ ಮಾಜಿ ಮುಖ್ಯಮಂತ್ರಿ ಸಚೀಂದ್ರ ಲಾಲ್ ಸಿಂಗ್ ಪುತ್ರ, ಮಾಜಿ ಅಧ್ಯಕ್ಷ ಆಶಿಶ್ ಲಾಲ್ ಸಿಂಗ್ ಸೇರಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಐವರು ಹಿರಿಯ ನಾಯಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ತ್ರಿಪುರಾ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಯ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಸುಶಾಂತ ಚೌಧರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಮಿತ್ ರಕ್ಷಿತ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ನ ಈ ನಾಯಕರು ಬಿಜೆಪಿ ಸೇರ್ಪಡೆಯಾದರು.
ತ್ರಿಪುರಾ ರಾಜ್ಯ ಟಿಎಂಸಿಯ ಮಾಜಿ ಅಧ್ಯಕ್ಷ ಆಸಿಶ್ ಲಾಲ್ ಸಿಂಗ್, ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಸಭೆ ಚುನಾವಣೆ ಅಭ್ಯರ್ಥಿ ಕೊಹೇಲಿ ದಾಸ್, ಟಿಎಂಸಿ ಕಾರ್ಯದರ್ಶಿ ಕೃಷ್ಣಕಾಂತ ದೇಬನಾಥ್, ಬಿಸ್ವನಾಥ್ ಘೋಷ್, ಸ್ವಪಂದೀಪ್ ಚಕ್ರವರ್ತಿ ಟಿಎಂಸಿ ಪಕ್ಷವನ್ನು ತ್ಯಜಿಸಿ, ಭಾರತೀಯ ಜನತಾ ಪಾರ್ಟಿಗೆ ಇಂದು ಸೇರ್ಪಡೆಯಾದರು.
ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತ್ರಿಪುರಾದಲ್ಲಿನ ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಅವರು ನಮ್ಮನ್ನೆಲ್ಲ ನಿರ್ಲಕ್ಷ್ಯ ಮಾಡಿದ್ದರಿಂದಲೇ ನಾವು ಪಕ್ಷವನ್ನು ತ್ಯೆಜಿಸಿ ಬಿಜೆಪಿಗೆ ಹೊಗಬೇಕಾಯಿತು ಎಂದು ಅವರು ಮಮತಾ ಬ್ಯಾನರ್ಜಿ ಅವರ ವಿರುದ್ಧ ಹರಿಹಾಯ್ದರು.
"ತ್ರಿಪುರಾ ಮಾಜಿ ಮುಖ್ಯಮಂತ್ರಿ ಸುಧೀರ್ ರಂಜನ್ ಮಜುಂದಾರ್ ಅವರು ರಾಜ್ಯದಲ್ಲಿ ಟಿಎಂಸಿ ಸ್ಥಾಪನೆ ಮಾಡಿದರು. ಆದರೆ ಅವರೇ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಏಳು ದಿನಗಳ ಕಾಲ ಕಾಯಬೇಕಾದಂತಹ ಪರಿಸ್ಥಿತಿ ಬಂದೊದಗಿತ್ತು. ಈ ಬೆಳವಣಿಗೆಯಿಂದ ಮಜುಂದಾರ್ ತೀವ್ರ ನಿರಾಶೆಗೊಂಡಿದ್ದರು. ಕೊನೆಗೂ ಮಜುಂದಾರ್ ಅವರನ್ನು ಭೇಟಿಯಾಗಲೇ ಇಲ್ಲ. ರಾಜ್ಯದ ಅಧ್ಯಕ್ಷ ಪರಿಸ್ಥಿತಿಯೇ ಹೀಗಾದರೆ ಇನ್ನು ಅಭ್ಯರ್ಥಿಗಳು ಸೇರಿದಂತೆ ಅನೇಕ ನಾಯಕರು ಸಹ ಮಮತಾ ಬ್ಯಾನರ್ಜಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಟಿಎಂಸಿಯ ಮಾಜಿ ಅಧ್ಯಕ್ಷರಾಗಿದ್ದ ಆಶಿಶ್ ಲಾಲ್ ಸಿಂಗ್ ಅಸಮಾಧಾನ ತೋಡಿಕೊಂಡರು.
ಈ ಮಾತನ್ನು ಹೇಳುವ ಮೂಲಕ ತಾವೇಕೆ ಟಿಎಂಸಿ ಬಿಡಬೇಕಾಯಿತು ಎಂಬುದಕ್ಕೆ ಆಶಿಶ್ ಲಾಲ್ ಸಿಂಗ್ ಸ್ಪಷ್ಟನೆ ಕೊಟ್ಟರು. "ಮಮತಾ ಬ್ಯಾನರ್ಜಿ ಅವರು ತ್ರಿಪುರಾಗೆ ಭೇಟಿ ನೀಡಿದಾಗಲೆಲ್ಲಾ ಇತರರನ್ನು ಭೇಟಿಯಾಗಲಿಲ್ಲ. ಏಕೆ ಹೀಗಾಗುತ್ತಿದೆ? ಇತ್ತೀಚಿನ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಎರಡು ದಿನ ತಂಗಿದ್ದರೂ ಅವರು ಪಕ್ಷದ ಯಾವ ಕಾರ್ಯಕರ್ತರನ್ನು, ಮುಖಂಡರನ್ನು ಭೇಟಿ ಮಾಡಲಿಲ್ಲ. ಅವರು ತ್ರಿಪುರಾದ ಜನರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ವಿವರಿಸಿದ ಸಿಂಗ್, "ಬಿಜೆಪಿ, ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಯ ಮತ್ತು ಇತರ ಯುವ ನಾಯಕರ ಕೆಲಸದಿಂದ ನಾವು ಪ್ರಭಾವಿತರಾಗಿದ್ದೇವೆ" ಎಂದು ಇದೇ ವೇಳೆ ಗುಣಗಾನ ಮಾಡಿದರು.
ಇದನ್ನು ಓದಿ: Maharashtra Politics: ಅಜಿತ್ ಸಭೆಯಲ್ಲಿ 29, ಶರದ್ ಸಭೆಯಲ್ಲಿ 11 ಶಾಸಕರ ಹಾಜರಿ: 13 ಶಾಸಕರೆಲ್ಲಿ?