ಥಾಣೆ(ಮಹಾರಾಷ್ಟ್ರ): ಇಲ್ಲಿನ 5 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದುಬಿದ್ದು ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಇಂದು ಸಂಭವಿಸಿದೆ. ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಥಾಣೆಯ ಉಲ್ಲಾಸನಗರದ ಕ್ಯಾಂಪ್ ನಂ.5 ಪ್ರದೇಶದಲ್ಲಿರುವ ಮಾನಸ್ ಟವರ್ ಕುಸಿದು ಬಿದ್ದ ಕಟ್ಟಡ. ಇದು 5 ಅಂತಸ್ತುಗಳನ್ನು ಹೊಂದಿದ್ದು, 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ 30 ಫ್ಲಾಟ್ಗಳಿವೆ.
ಹಳೆಯದಾಗಿದ್ದ ಕಟ್ಟಡದ 4ನೇ ಅಂತಸ್ತಿನ ಸ್ಲ್ಯಾಬ್ ಇಂದು ಬೆಳಗ್ಗೆ ಏಕಾಏಕಿ ಉದುರಿದೆ. ಗ್ರೌಂಡ್ವರೆಗೂ ಇಡೀ ಕಟ್ಟಡ ಕುಸಿದಿದೆ. ಇದರಿಂದ ನೆಲಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಕಟ್ಟಡದ ಮಧ್ಯಭಾಗದಲ್ಲಿ ಈ ದುರಂತ ನಡೆದಿದ್ದು, ಸುರಂಗ ಕೊರೆದಂತೆ ಕಾಣುತ್ತದೆ.
ವಿಷಯ ತಿಳಿದ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವಶೇಷಗಳಡಿ ಇನ್ನೂ 4 ರಿಂದ 5 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಗರಪಾಲಿಕೆ, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಯೂ ರಕ್ಷಣೆಗೆ ಧಾವಿಸಿದ್ದಾರೆ.
5 ಅಂತಸ್ತಿನ ಈ ಕಟ್ಟಡವನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಟ್ಟಡ ಹಳೆಯದಾಗಿ, ಬೀಳುವ ಸ್ಥಿತಿಗೆ ಬಂದಿತ್ತು. ಬಿಲ್ಡಿಂಗ್ ಅಪಾಯಕಾರಿಯಾಗಿದ್ದರಿಂದ ಖಾಲಿ ಮಾಡಲು ಸೂಚಿಸಿ ನಗರಸಭೆ ಇಲ್ಲಿನ ನಿವಾಸಿಗಳಿಗೆ 2 ಬಾರಿ ನೋಟಿಸ್ ನೀಡಿದೆ ಎಂದು ಪುರಸಭೆ ಆಡಳಿತ ತಿಳಿಸಿದೆ.
ಈ ಕಟ್ಟಡ ಅಪಾಯಕಾರಿ ಎಂದು ಪುರಸಭೆ ಆಡಳಿತ ಈಗಾಗಲೇ ಘೋಷಿಸಿತ್ತು. ಹೀಗಾಗಿ ಇಲ್ಲಿ ಹೆಚ್ಚಿನ ಜನರು ಖಾಲಿ ಮಾಡಿದ್ದರು. ಕೆಲ ನಿವಾಸಿಗಳು ಇಲ್ಲಿಯೇ ಉಳಿದುಕೊಂಡಿದ್ದರು ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.