ಮಥುರಾ(ಉತ್ತರ ಪ್ರದೇಶ): 18 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೋರ್ಟ್ ಮಹತ್ವದ ತೀರ್ಪು ಹೊರಹಾಕಿದ್ದು, ಆರೋಪಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೂರು ವರ್ಷಗಳ ಹಿಂದೆ ನಡೆದಿರುವ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ.
ಜುಲೈ 9, 2018ರ ತಡರಾತ್ರಿ ಈ ಘಟನೆ ನಡೆದಿತ್ತು. ತಾಯಿ ಹಾಗೂ ಆಕೆಯ ಇಬ್ಬರು ಸಂಬಂಧಿಕರೊಂದಿಗೆ ಅಸ್ವಸ್ಥ ಮಹಿಳೆ ಮಥುರಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಳು. ಅವರೊಂದಿಗೆ ಪ್ರದಕ್ಷಿಣೆ ಹಾಕುತ್ತಿದ್ದ ಸಂದರ್ಭದಲ್ಲಿ ತನಗೆ ದಣಿವಾಗಿದೆ ಎಂದು ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ವಾಪಸ್ ಬಂದಿದ್ದಳು. ಈ ವೇಳೆ, ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು. ಘಟನೆ ಬಗ್ಗೆ ತಾಯಿ ಮುಂದೆ ಮಾನಸಿಕ ಅಸ್ವಸ್ಥ ಮಹಿಳೆ ಹೇಳಿಕೊಂಡಿದ್ದಳು.
ಇದಾದ ಬಳಿಕ ಸಂತ್ರಸ್ತೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ರೇಪ್) ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಇದೀಗ ತೀರ್ಪು ಹೊರಹಾಕಿದೆ.
ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಸುಭಾಷ್ ಚತುರ್ವೇದಿ ತೀರ್ಪು ನೀಡಿದ್ದು, 47 ವರ್ಷದ ಆರೋಪಿಗೆ 20 ವರ್ಷಗಳ ಕಾಲ ಜೈಲುಶಿಕ್ಷೆ ಹಾಗೂ 2.20 ಲಕ್ಷ ರೂಪಾಯಿ ದಂಡ ಕಟ್ಟುವಂತೆ ತಿಳಿಸಿದೆ. ಆರೋಪಿ ಕಟ್ಟುವ ದಂಡದ ಹಣವನ್ನ ಸಂತ್ರಸ್ತೆಗೆ ಸಹಾಯಧನವಾಗಿ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.