ಹಲ್ದ್ವಾನಿ(ಉತ್ತರಾಖಂಡ): ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ರೈಲ್ವೇ ಇಲಾಖೆಯ ಭೂಮಿ ಅತಿಕ್ರಮಣ ಮಾಡಿಕೊಂಡು, ಬರೋಬ್ಬರಿ 4500 ಮನೆ ನಿರ್ಮಾಣ ಮಾಡಲಾಗಿದ್ದು, ಇದೀಗ ಅಲ್ಲಿನ ಜಿಲ್ಲಾಡಳಿತ ಅವುಗಳನ್ನು ತೆರವುಗೊಳಿಸಲು ಮುಂದಾಗಿದೆ. ಅದಕ್ಕಾಗಿ ನಾಗಾಲ್ಯಾಂಡ್ ಮತ್ತು ಅಸ್ಸೋಂನಿಂದ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡುವಂತೆ ಮನವಿ ಮಾಡಿಕೊಂಡಿದೆ.
ಸುಮಾರು 29 ಎಕರೆ ರೈಲ್ವೆ ನಿಲ್ದಾಣದ ಭೂಮಿಯಲ್ಲಿ ಇಷ್ಟೊಂದು ಮನೆಗಳ ನಿರ್ಮಾಣ ಮಾಡಲಾಗಿದ್ದು, ಅವುಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಮತ್ತು ರೈಲ್ವೆ ಇಲಾಖೆ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಉತ್ತರಾಖಂಡ ಹೈಕೋರ್ಟ್ ರೈಲ್ವೆ ಭೂಮಿ ಒತ್ತುವರಿ ಮಾಡಿಕೊಂಡಿರುವವರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ನೈನಿತಾಲ್ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದು, ಇದೀಗ ಅಕ್ರಮ ಒತ್ತುವರಿ ತೆಗೆದು ಹಾಕಲು ಮುಂದಾಗಿದೆ.
ಇದನ್ನೂ ಓದಿ: 'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್ ಅವರನ್ನೊಮ್ಮೆ ನೋಡಿ!
ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡ ನೆಲಸಮಗೊಳಿಸುವ ಉದ್ದೇಶದಿಂದ ರೈಲ್ವೆ ಮಂಡಳಿ ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಈಗಾಗಲೇ ಅನೇಕ ಸುತ್ತಿನ ಸಭೆ ನಡೆಸಿದ್ದು, ತೆರವು ಕಾರ್ಯಾಚರಣೆ ಯೋಜನೆ ಸಿದ್ಧಪಡಿಸಿದೆ. ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಧೀರಜ್ ಸಿಂಗ್ ಗಾರ್ಬ್ಯಾಲ್, ಅಕ್ರಮವಾಗಿ ನಿರ್ಮಾಣಗೊಂಡಿರುವ ಮನೆಗಳ ತೆರವು ಕಾರ್ಯಾಚರಣೆ ಸುಮಾರು 1 ತಿಂಗಳ ಬೇಕಾಗಬಹುದು. ಈ ಪ್ರದೇಶದಲ್ಲಿ ಯಾವುದೇ ರೀತಿಯ ಹಾನಿ ಹಾಗೂ ಪರಿಸರ ಹಾಳು ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.