ಮುಂಬೈ: ಮನ್ಸುಖ್ ಹಿರೇನ್ ಹತ್ಯೆಗಾಗಿ ಆರೋಪಿಗೆ 45 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲು ಮನವಿ ಮಾಡಿದೆ.
ಪ್ರಕರಣದ ಹಿನ್ನೆಲೆ:
ಫೆಬ್ರವರಿ 25, 2021ರಂದು, ಉದ್ಯಮಿ ಮುಖೇಶ್ ಅಂಬಾನಿ ನಿವಾಸವಾದ ಆ್ಯಂಟಿಲಿಯಾ ಬಳಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಮನ್ಸುಖ್ ಹಿರೇನ್ ಒಡೆತನದಲ್ಲಿದ್ದ ಕಾರು ಕಳವಾಗಿರುವ ಬಗ್ಗೆ ವರದಿಯಾಗಿತ್ತು.
ಮಾರ್ಚ್ 5ರಂದು ಮನ್ಸುಖ್ ಹಿರೇನ್ ಅವರ ಮೃತದೇಹ ಥಾಣೆಯ ರೆಟಿ ಬಂದರ್ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಎನ್ಐಎ ಈವರೆಗೆ 150 ಜನರ ಹೇಳಿಕೆ ದಾಖಲಿಸಿಕೊಂಡಿದೆ. ಬಳಿಕ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಪೊಲೀಸ್ ಅಧಿಕಾರಿಗಳಾದ ಪ್ರದೀಪ್ ಶರ್ಮಾ ಮತ್ತು ಸಚಿನ್ ವಾಜೆ ಅವರನ್ನು ಬಂಧಿಸಲಾಗಿತ್ತು.
ಇದಕ್ಕೂ ಮೊದಲು ಮನ್ಸುಖ್ ಹಿರೇನ್ ಕೊಲೆ ಪ್ರಕರಣದ ಐದನೇ ಆರೋಪಿ ಸುನಿಲ್ ಮಾನೆ ಅವರ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿತ್ತು. ಈ ವೇಳೆ ಕೆಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಏರಿಕೆ: ಹೊಸದಾಗಿ 42,625 ಜನರಿಗೆ ಸೋಂಕು