ಡೆಹ್ರಾಡೂನ್ (ಉತ್ತರಾಖಂಡ ): ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್, ಸ್ಮಾರ್ಟ್‍ಪೋನ್, ಐಪ್ಯಾಡ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್ನಂತಹ ವಿನೂತನ ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳು ಕೈಲಿದ್ದರೆ ಸಾಕು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿ ಇರುತ್ತದೆ. ದೇಶಾದ್ಯಂತ ಜನರು 5G ಕಡೆಗೆ ಸಾಗುತ್ತಿರುವಾಗ, ಉತ್ತರಾಖಂಡದಲ್ಲಿ ಕೆಲವು ಹಳ್ಳಿಗಳಿಗೆ ಇನ್ನೂ 2 ಜಿ ಸೇವೆ ಕೂಡ ಲಭ್ಯವಿಲ್ಲ.
ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಜನರ ಜೀವನದ ಅತ್ಯಗತ್ಯ ಭಾಗವಾಗಿದೆ. ಬಹುತೇಕ ಎಲ್ಲಾ ಕಾರ್ಯಗಳನ್ನು ಮೊಬೈಲ್ ಫೋನ್ ಮೂಲಕವೇ ಮಾಡಬಹುದು. ಆದರೆ, ಮೊಬೈಲ್ನಲ್ಲಿ ಸಂವಹನ ನಡೆಸಲು ಅಥವಾ ಇಂಟರ್ನೆಟ್ ಬಳಕೆ ಮಾಡಲು ನೆಟ್‌ವರ್ಕ್ ಬಹಳ ಮುಖ್ಯ. ನೆಟ್ವರ್ಕ್ವಿಲ್ಲ ಎಂದರೆ ಯಾರೊಂದಿಗೂ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಇದೀಗ ದೇಶದಲ್ಲಿ 4 ಜಿ ಬಳಸಲಾಗುತ್ತಿದ್ದು, 5 ಜಿ ಕೂಡ ಶೀಘ್ರದಲ್ಲೇ ಬರಲಿದೆ.
434 ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಕೊರತೆ:
ಉತ್ತರಾಖಂಡ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಇತರ ರಾಜ್ಯಗಳಿಗಿಂತ ಸಾಕಷ್ಟು ಭಿನ್ನವಾಗಿವೆ. ರಾಜ್ಯದಲ್ಲಿ ಹೆಚ್ಚು ಪರ್ವತ ಪ್ರದೇಶಗಳಿರುವುದರಿಂದ ಅಭಿವೃದ್ಧಿ ದೊಡ್ಡ ಸವಾಲಾಗಿದೆ. ಹೀಗಾಗಿ ಕೆಲ ಪ್ರದೇಶಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ರಾಜ್ಯದ 13 ಜಿಲ್ಲೆಗಳ 434 ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಇನ್ನೂ ಲಭ್ಯವಿಲ್ಲ.
ಐಟಿಡಿಎಯಿಂದ ಪಡೆದ ಮಾಹಿತಿಯ ಪ್ರಕಾರ, 2020 ರ ಮೇ ವರೆಗೆ, ರಾಜ್ಯದಲ್ಲಿ 15,745 ಗ್ರಾಮಗಳಲ್ಲಿ 434 ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೇವೆಗಳು ಇನ್ನೂ ಲಭ್ಯವಿಲ್ಲ. ಮತ್ತು 3,738 ಗ್ರಾಮಗಳಿಗೆ ಕೇವಲ 2 ಜಿ ಸೌಲಭ್ಯ ಮಾತ್ರ ಲಭ್ಯವಿದ್ದು, 3 ಜಿ ಅಥವಾ 4 ಜಿ ಮೊಬೈಲ್ ನೆಟ್‌ವರ್ಕ್ ಕೊರತೆ ಕಂಡು ಬಂದಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಭಾರತ್ ನೆಟ್ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಎಲ್ಲ ಗ್ರಾಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದು ಮತ್ತು ರಾಜ್ಯದ ಪರ್ವತ ಪ್ರದೇಶಗಳಲ್ಲಿ ಗೋಪುರಗಳನ್ನು ನಿರ್ಮಿಸಿ ನೆಟ್‌ವರ್ಕ್ ಸೌಲಭ್ಯ ಒದಗಿಸಲು ನೀತಿ ರೂಪಿಸಲಾಗಿದೆ ಎಂದು ಐಟಿಡಿಎ ನಿರ್ದೇಶಕ ಅಮಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.