ಮುಂಬೈ (ಮಹಾರಾಷ್ಟ್ರ) : ಜೈಪುರದಿಂದ ಮುಂಬೈಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 4 ಮಂದಿಯನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಕಾನ್ಸ್‌ಟೇಬಲ್ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಸಾವಿಗೀಡಾದವರಲ್ಲಿ ಮೂವರು ಪ್ರಯಾಣಿಕರಾಗಿದ್ದು, ಮತ್ತೊಬ್ಬರನ್ನು RPF ಸಬ್ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಕಾನ್ಸ್‌ಟೇಬಲ್ ಚೇತನ್ ಕುಮಾರ್ ಗುಂಡು ಹಾರಿಸಿದ ಆರೋಪಿ. ಮೃತ ಆರ್‌ಪಿಎಫ್ ಎಎಸ್‌ಐ ಅವರನ್ನು ಟಿಕಾ ರಾಮ್ ಮೀನಾ ಎಂದು ಗುರುತಿಸಲಾಗಿದೆ. ರೈಲು ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಕಾನ್ಸ್‌ಟೇಬಲ್, ಚಲಿಸುತ್ತಿದ್ದ ಜೈಪುರ ಎಕ್ಸ್‌ಪ್ರೆಸ್ ಒಳಗೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಇತರೆ ಮೂವರು ಮೂವರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಶಸ್ತ್ರಾಸ್ತ್ರ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆ ತಿಳಿಸಿದೆ.
ಗುಂಡಿನ ದಾಳಿಯಿಂದಾಗಿ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಕುರಿತಾದ ಮಾಹಿತಿಯನ್ನು ಉತ್ತರ ಜಿಆರ್‌ಪಿ ಡಿಸಿಪಿಗೆ ನೀಡಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆ ಹೇಳಿದೆ.
ಇದನ್ನೂ ಓದಿ : Encounter in Kulgam: ತಡರಾತ್ರಿ ಗುಂಡಿನ ದಾಳಿ.. ಉಗ್ರನೊಬ್ಬನನ್ನು ಹೊಡೆದುರುಳಿಸಿದ ಸೇನೆ!
ಆಂತರಿಕ ಸಂಘರ್ಷ ಕಾರಣ : ಗುಜರಾತ್ ರಾಜ್ಯದಿಂದ ಪಾಲ್ಘರ್‌ಗೆ ರೈಲು ಪ್ರವೇಶಿಸುತ್ತಿದ್ದಂತೆ ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದು, ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಆರ್‌ಪಿ ಪೊಲೀಸರು ಮತ್ತು ಆರ್‌ಪಿಎಫ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ದಾಳಿ ಬಳಿಕ ರೈಲನ್ನು ಮೀರಾ-ರೋಡ್ ದಹಿಸರ್‌ನಲ್ಲಿ ಕೆಲ ಕಾಲ ನಿಲ್ಲಿಸಲಾಗಿತ್ತು. ಸದ್ಯಕ್ಕೆ ಈ ರೈಲು ಮುಂಬೈ ಸೆಂಟ್ರಲ್‌ಗೆ ಆಗಮಿಸಿದೆ. 12957 ಸಂಖ್ಯೆಯ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಬಿ-5 ಕೋಚ್‌ನಲ್ಲಿ ಘಟನೆ ನಡೆದಿದೆ. ಆರ್‌ಪಿಎಫ್ ಯೋಧರ ನಡುವಿನ ಜಗಳದಿಂದ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು : ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್
ಗಲಾಟೆ ವೇಳೆ ಸಬ್ ಇನ್ಸ್‌ಪೆಕ್ಟರ್ ಕೊಂದ ಆರ್‌ಪಿಎಫ್ ಕಾನ್ಸ್‌ಟೇಬಲ್, ಬಳಿಕ ಮತ್ತೊಂದು ಬೋಗಿಗೆ ಹೋಗಿದ್ದಾನೆ. ಅಲ್ಲಿ ಇದ್ದಕ್ಕಿದ್ದಂತೆ ಮೂವರು ಪ್ರಯಾಣಿಕರಿಗೆ ಗುಂಡು ಹಾರಿಸಿದ್ದಾನೆ. ಬಳಿಕ ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಜಿಗಿದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಮತ್ತು ಆರ್‌ಪಿಎಫ್ ಅಧಿಕಾರಿಗಳ ನೆರವಿನಿಂದ ಆರೋಪಿಯನ್ನು ಮೀರಾ ರೋಡ್‌ನಲ್ಲಿ ಬಂಧಿಸಲಾಗಿದೆ. ಮೃತದೇಹಗಳನ್ನು ಜೈಪುರ ಎಕ್ಸ್‌ಪ್ರೆಸ್‌ನಿಂದ ಹೊರ ತೆಗೆಯಲಾಗಿದ್ದು, ಶತಾಬ್ದಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುಂಬೈ ಸೆಂಟ್ರಲ್ ರೈಲ್ವೆ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ, ಮೃತ ಪ್ರಯಾಣಿಕರ ಗುರುತಿಸುವಿಕೆ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ : Bihar crime : ಮಾಜಿ ಡಿಸಿಎಂ ಕಾರ್ಯಕ್ರಮದಲ್ಲಿ ಹಣ ವಿಚಾರವಾಗಿ ಬಿಜೆಪಿ ಮುಖಂಡನಿಂದ ಗುಂಡಿನ ದಾಳಿ